LATEST NEWS
ಗೂಗಲ್ ಪ್ಲೇ ಸ್ಟೋರ್ ನಿಂದ ಪೇಟಿಎಂ ಔಟ್…
ಗೂಗಲ್ ಪ್ಲೇ ಸ್ಟೋರ್ ನಿಂದ ಪೇಟಿಎಂ ಔಟ್…
ನವದೆಹಲಿ, ಸೆಪ್ಟಂಬರ್ 18: ಹಣಕಾಸು ಸೇವೆಯನ್ನು ನೀಡುವ ಪೇಟಿಎಂ ಆ್ಯಪನ್ನು ಗೂಗಲ್ ತನ್ನ ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿದೆ.
ಇಂದು ದಿಢೀರನೆ ಈ ಬೆಳವಣಿಗೆ ನಡೆದಿದ್ದು, ಗೂಗಲ್ ಪ್ಲೇ ಸ್ಟೋರ್ ನ ಕೆಲವು ನಿಯಮಗಳನ್ನು ಉಲ್ಲಂಘಿಸಿದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗೂಗಲ್ ಸ್ಪಷ್ಟಪಡಿಸಿದೆ.
ಭಾರತದಲ್ಲಿ ಹಣಕಾಸು ಸೇವೆಯನ್ನು ನೀಡುವ ಅತ್ಯಂತ ಪ್ರಭಾವೀ ಆ್ಯಪ್ ಗಳಲ್ಲಿ ಒಂದಾಗಿರುವ ಪೇಟಿಎಂ ಅನ್ನು ಸುಮಾರು 50 ಲಕ್ಷ ಭಾರತೀಯರು ಉಪಯೋಗಿಸುತ್ತಿದ್ದಾರೆ.
ಪೇಟಿಎಂ ಅನ್ನು ಪ್ಲೇ ಸ್ಟೋರ್ ನಿಂದ ತೆಗೆದುಹಾಕಿದ ಕುರಿತು ಸ್ಪಷ್ಟನೆ ನೀಡಿರುವ ಗೂಗಲ್ ಪೇಟಿಎಂ ಆ್ಯಪ್ ಮೂಲಕ ಆನ್ ಲೈನ್ ಕ್ಯಾಸಿನೋ ಹಾಗೂ ಇತರ ಜೂಜಿನ ಆಟಗಳನ್ನು ನಿರ್ವಹಿಸಲಾಗುತ್ತಿದ್ದು, ಇದು ಗೂಗಲ್ ನಿಯಮಗಳ ಉಲ್ಲಂಘನೆಯಾಗಿದೆ.
ಪೇಟಿಎಂ ತನ್ನ ಇತರ ಎರಡು ಆ್ಯಪ್ ಗೇಮ್ ಗಳ ಮೂಲಕ ಇಂಥ ನಿಯಮಬಾಹಿರ ವ್ಯವಹಾರಗಳನ್ನು ಮಾಡುತ್ತಿರುವುದು ಗಮನಕ್ಕೆ ಬಂದ ಹಿನ್ನಲೆಯಲ್ಲಿ ಹಾಗೂ ಈ ಬಗ್ಗೆ ಹಲವು ಬಾರಿ ಸೂಚನೆಗಳನ್ನು ನೀಡಿರುವ ಹಿನ್ನಲೆಯಲ್ಲಿ ಈ ರೀತಿಯ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದೂ ಗೂಗಲ್ ತಿಳಿಸಿದೆ.
ಈ ನಡುವೆ ಪೇಟಿಎಂ ಗೂಗಲ್ ಪ್ಲೇ ಸ್ಟೋರ್ ನಿಂದ ದಿಢೀರನೆ ಮಾಯವಾಗಿರುವುದು ಪೇಟಿಎಂ ಬಳಕೆದಾರರಲ್ಲೂ ಗೊಂದಲ ಮೂಡಿಸಿದೆ.
ಹಲವರು ಪೇಟಿಎಂ ಮೂಲಕವೇ ತಮ್ಮ ಹಣಕಾಸಿನ ವ್ಯವಹಾರ ನಡೆಸುತ್ತಿದ್ದು, ತಮ್ಮ ಹಣಕ್ಕೆ ಸಂಚಕಾರ ಬರಲಿದೆಯೇ ಎನ್ನುವ ಆತಂಕದಲ್ಲೂ ಇದ್ದಾರೆ.
ಪೇಟಿಎಂ ಗೂಗಲ್ ನ ಗೂಗಲ್ ಪೇ ಗೆ ಭಾರತದಲ್ಲಿ ಸ್ಪರ್ಧೆ ನೀಡುವಂತಹ ಹಣಕಾಸಿನ ವ್ಯವಹಾರದ ಆ್ಯಪ್ ಕೂಡಾ ಆಗಿದೆ.