National
ಫುಡ್ ಡೆಲಿವರಿಗೂ ಇಳಿಯಲಿದೆ ಗೂಗಲ್ !!
ನವದೆಹಲಿ ಜುಲೈ 14: ಗೂಗಲ್ ಸರ್ಚ್ ಇಂಜಿನ್ ಯಾರಿಗೆ ಗೊತ್ತಿಲ್ಲ ಹೇಳಿ. ಏನೇ ಸರ್ಚ್ ಮಾಡಿದ್ರೂ ವಿಶ್ವದೆಲ್ಲೆಡೆಯ ವಿಚಾರಗಳು ಒಂದೇ ಸೂರಿನಲ್ಲಿ ಸಿಗುವಂಥ ಏಕೈಕ ಜಾಲತಾಣ. ಇಂಥ ಸರ್ಚ್ ಇಂಜಿನಲ್ಲಿ ಫುಡ್ ಡೆಲಿವರಿಯೂ ಸಿಕ್ಕಿಬಿಟ್ಟರೆ ಹೇಗಿರಬಹುದು. ಹೌದು.. ಕೇಳಿದರೆ ಮಜಾ ಅನಿಸುತ್ತಲ್ಲ.. ಇಂಥ ಗೂಗಲ್ ಮ್ಯಾಜಿಕ್ ಭಾರತದಲ್ಲಿ ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ.
ಎರಡು ದಿನಗಳ ಹಿಂದಷ್ಟೇ ಗೂಗಲ್ ಸಿಇಓ ಸುಂದರ್ ಪಿಚೈ ಭಾರತದಲ್ಲಿ ಡಿಜಿಟಲ್ ಇಂಡಿಯಾಕ್ಕಾಗಿ 75 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವುದನ್ನು ಪ್ರಕಟಿಸಿದ್ದರು. ಈಗ ಗೂಗಲ್ ಡಾಟ್ ಕಾಮ್ ಪ್ಲಾಟ್ ಫಾರ್ಮ್ ನಲ್ಲಿ ಫುಡ್ ಡೆಲಿವರಿಗೂ ಜಾಗ ಸಿಗಲಿದೆ ಎನ್ನುವ ಸುದ್ದಿ ಬಂದಿದೆ. ಗೂಗಲ್ ಸರ್ಚ್ ಇಂಜಿನಲ್ಲಿ ಇನ್ನು ಡೈರೆಕ್ಟಾಗಿ ಸರ್ಚ್ ಮಾಡಿದರೆ ಫುಡ್ ಡೆಲಿವರಿಯೂ ಸಿಗಲಿದೆ. ಹಾಗಂತ, ಅದಕ್ಕೆಂದು ಗೂಗಲ್ ಸಂಸ್ಥೆ ತಮ್ಮದೇ ಡೆಲಿವರಿ ಬಾಯ್ಸ್ ಇಟ್ಕೊಳಲ್ಲ. ಡೆಲಿವರಿ ಮಾಡುವುದಕ್ಕೆ ಥರ್ಡ್ ಪಾರ್ಟಿಗೆ ಗುತ್ತಿಗೆ ಕೊಡಲಿದೆ. Dunzo ನಂಥ ಕಂಪನಿಗಳು ಡೆಲಿವರಿ ಕೆಲಸ ಮಾಡುತ್ತಿದ್ದು ಅದು ಗೂಗಲ್ ಜೊತೆ ಸೇರುವ ಸಾಧ್ಯತೆಯಿದೆ. ಗೂಗಲ್ ಯಾರಿಗೆ ಈ ಕಂಟ್ರಾಕ್ಟ್ ಕೊಡುತ್ತೋ ಆ ಕಂಪನಿಯ ಡೆಲಿವರಿ ಬಾಯ್ ಗಳು ನೀವು ಇರುವ ಕಡೆ ಫುಡ್ ಹೊತ್ತು ತರಲಿದ್ದಾರೆ.
ಗೂಗಲ್ ಈಗಾಗ್ಲೇ ಅಮೆರಿಕದಲ್ಲಿ ಫುಡ್ ಡೆಲಿವರಿ ಮಾಡುತ್ತಿದೆ. ಅಲ್ಲಿ order food.google.com ನಲ್ಲಿ ಫುಡ್ ಡೆಲಿವರಿಗೆ ಆರ್ಡರ್ ಕೊಡಬಹುದು. ಡೆಲಿವರಿಯನ್ನು ಥರ್ಡ್ ಪಾರ್ಟಿ ಯಾರಾದ್ರೂ ಮಾಡ್ತಾರೆ. ಪಾವತಿಯನ್ನು ಗೂಗಲ್ ನಲ್ಲಿಯೇ ಮಾಡಬೇಕು.
ವಿದೇಶಿ ಮೂಲದ ಝೊಮೆಟೊ, ಸ್ವಿಗ್ಗಿ ಕಂಪನಿಗಳು ಆನ್ ಲೈನ್ ಫುಡ್ ಡೆಲಿವರಿ ಮೂಲಕ ಭಾರತದಲ್ಲಿ ಕೋಟಿಗಟ್ಟಲೆ ವ್ಯವಹಾರ ಮಾಡುತ್ತಿದೆ. ಅದಕ್ಕಾಗಿ ಪ್ರತ್ಯೇಕ ಏಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಆದರೆ ಗೂಗಲ್ ನಲ್ಲಿ ಯಾವುದೇ ಏಪ್ ಡೌನ್ಲೋಡ್ ಮಾಡಬೇಕಾಗಿಲ್ಲ. ಹೀಗಾಗಿ ಗೂಗಲ್ ಸಂಸ್ಥೆ ಫುಡ್ ಡೆಲಿವರಿಗೆ ಇಳಿದರೆ ಅದು ಕ್ರಾಂತಿ ಮಾಡಲಿದೆ. ಗೂಗಲ್ ಮೀರಿಸುವ ಸರ್ಚ್ ಇಂಜಿನ್ ಇನ್ನೊಂದಿಲ್ಲ ಅನ್ನುವ ಮಾತನ್ನು ನ್ಯಾಶನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ಅನುರಾಗ್ ಕತ್ರಿಯಾರ್ ಹೇಳುತ್ತಾರೆ. ಗೂಗಲ್ ಫುಡ್ ಡೆಲಿವರಿ ಮಾಡಿದರೆ ಝೊಮೆಟೊ ಮತ್ತು ಸ್ವಿಗ್ಗಿಗೆ ದೊಡ್ಡ ಹೊಡೆತವಂತೂ ಬೀಳಲಿದೆ.