LATEST NEWS
ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ – ಆರೋಪಿ ಮುರುಗನ್ ದೇವರ್ ಮನೆಯಿಂದ ಚಿನ್ನಾಭರಣ ವಶಕ್ಕೆ
ತಮಿಳುನಾಡು ಜನವರಿ 24: ಉಳ್ಳಾಲದ ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂದಿಸಿದಂತೆ ಬಂಧಿತ ಆರೋಪಿ ಮುರುಗನ್ ದೇವರ್ ಮನೆಯಿಂದ ಚಿನ್ನಾಭರಣಗಳನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿ ಮುರುಗನ್ ದೇವರ್ (35) ಪದ್ಮನೇರಿಯಲ್ಲಿರುವ ಮನೆ ಮೇಲೆ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನ ಜಾವದವರೆಗೆ ಮಂಗಳೂರು ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಪೊಲೀಸರು ಕೋಟ್ಯಂತರ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈಟಿವಿ ಭಾರತ್ ವರದಿ ಪ್ರಕಾರ ಸುಮಾರು 15 ಕೆಜಿ ಯಷ್ಟು ಚಿನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ದಾಳಿ ವೇಳೆ ಪರಿಸರದಲ್ಲಿ ತಮಿಳುನಾಡು ಪೊಲೀಸರು ಬಿಗಿ ಬಂದೋಬಸ್ತ್ ಎರ್ಪಡಿಸಿದ್ದರು.
ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕೆ. ಸಿ ರೋಡ್ನಲ್ಲಿರುವ ಕೃಷಿ ಸಹಕಾರಿ ಬ್ಯಾಂಕ್ಗೆ ಇದೇ ತಿಂಗಳ 17ರಂದು ಬೆಳಗ್ಗೆ 11.30ರ ಸುಮಾರಿಗೆ ಮುಸುಕುಧಾರಿ ತಂಡವೊಂದು ಪಿಸ್ತೂಲ್ ಹಾಗೂ ಚಾಕುಗಳೊಂದಿಗೆ ನುಗ್ಗಿತ್ತು. ಅಲ್ಲಿದ್ದ ಬ್ಯಾಂಕ್ ನೌಕರರನ್ನು ಬೆದರಿಸಿ ಸುಮಾರು 4 ಕೋಟಿ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ನಂತರ ಆರೋಪಿಗಳ ಬಂಧನಕ್ಕೆ 6ಕ್ಕೂ ಹೆಚ್ಚು ವಿಶೇಷ ತಂಡಗಳನ್ನು ರಚಿಸಿ ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಈಗಾಗಲೇ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಉಳಿದವರ ಬಂಧನಕ್ಕೆ ಶೋಧಕಾರ್ಯ ಮುಂದುವರೆಸಿದ್ದಾರೆ.