LATEST NEWS
ಚಿನ್ನದ ಸರ ಕದ್ದ ಅಂತರಾಜ್ಯ ಕಳ್ಳನ ಬಂಧಿಸಿದ ಉಡುಪಿ ಪೊಲೀಸರು…!!
ಉಡುಪಿ ಅಕ್ಟೋಬರ್ 29: ಉಡುಪಿ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕದ್ದ ಕಳ್ಳನನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು ದಾಂಡೇಲಿಯ ಪಟೇಲ್ ನಗರದ ನಿವಾಸಿ ಮೌಲಾಲಿ ಜಮಾದಾರ್ ಎಂದು ಗುರುತಿಸಲಾಗಿದೆ. ಈತ ಅಕ್ಟೋಬರ್ 3ರಂದು ಉಡುಪಿಯ ಕಡಿಯಾಳಿ ಮಹಿಷಮರ್ಧಿನಿ ದೇವಾಸ್ಥಾನದಲ್ಲಿ ಚಂಡಿಕಾ ಹೋಮ ಮುಗಿಸಿ ತೆರಳುತ್ತಿದ್ದ ಪ್ರೇಮ ಎಂಬುವರ ಕೊರಳಲ್ಲಿದ್ದ ಚಿನ್ನದ ಸರವನ್ನು ಮೌಲಾಲಿ ಜಮಾದಾರ್ ಕಿತ್ತುಕೊಂಡು ಪರಾರಿಯಾಗಿದ್ದ.
ಈ ಬಗ್ಗೆ ಪ್ರೇಮಾ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಳ್ಳನಿಗಾಗಿ ಬಲೆ ಬೀಸಿದ ಪೊಲೀಸರು, ದೇವಸ್ಥಾನದಲ್ಲಿದ್ದ ಸಿಸಿ ಟಿವಿ ದೃಶ್ಯಾವಳಿಗಳು ಮತ್ತು ಮೊಬೈಲ್ ಟವರ್ ಲೊಕೇಷನ್ ಆಧಾರಿಸಿ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕದ್ದ ಸರವನ್ನು ಆರೋಪಿಯು ಧಾರವಾಡದ ಟೋಲ್ ನಾಕಾ ಬಳಿಯ ಚಿನ್ನದ ಅಂಗಡಿಯೊಂದಕ್ಕೆ ಮಾರಿದ್ದ. ವಿಷಯ ಗೊತ್ತಾಗುತ್ತಿದ್ದಂತೆ ಈತನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ನಂತರ ಈತನೊಬ್ಬ ಅಂತರ್ ರಾಜ್ಯ ಕಳ್ಳ ಎಂಬುದೂ ಬಯಲಾಗಿದೆ. ಈತನ ವಿರುದ್ಧ ಕರ್ನಾಟಕ ಮತ್ತು ಗೋವಾದಲ್ಲಿ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಆರೋಪಿಯಿಂದ 3 ಲಕ್ಷ ಮೌಲ್ಯದ 63 ಗ್ರಾಂ ತೂಕದ ಚಿನ್ನವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.