DAKSHINA KANNADA
ಪುತ್ತೂರು – ಮಗುವಿಗೆ ಜನ್ಮ ನೀಡಿದ ಯುವತಿ – ಆರೋಪಿ ಕೃಷ್ಣ ಇನ್ನೂ ನಾಪತ್ತೆ

ಪುತ್ತೂರು ಜೂನ್ 28: ಮದುವೆಯಾಗುವುದಾಗಿ ನಂಬಿಸಿ ಸಹಪಾಠಿ ಯುವತಿಯನ್ನು ಗರ್ಭಿಣಿ ಮಾಡಿ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗರ್ಭಿಣಿಯಾಗಿರುವ ಯುವತಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಯುವತಿ ಗರ್ಭಿಣಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿ ಬಪ್ಪಳಿಗೆ ನಿವಾಸಿ ಕೃಷ್ಣ ಜೆ. ರಾವ್ (21) ವಿರುದ್ಧ ಈಗಾಗಲೇ ಮಹಿಳಾ ಠಾಣೆಯಲ್ಲಿ ಅತ್ಯಾಚಾರ ಮತ್ತು ನಂಬಿಕೆ ದ್ರೋಹದ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಲೇ ಆರೋಪಿ ತಲೆ ಮರೆಸಿಕೊಂಡಿದ್ದಾನೆ.

ಪುತ್ತೂರಿನಲ್ಲಿ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಇಬ್ಬರಿಗೆ ವೇಳೆ ಪ್ರೇಮಾಂಕುರವಾಗಿತ್ತು. ಬಳಿಕ 2024ರ ಅಕ್ಟೋಬರ್ 11ರಂದು ಕೃಷ್ಣ ಮನೆಗೆ ಕರೆದು ದೈಹಿಕ ಸಂಪರ್ಕ ಬೆಳೆಸಿದ ಆರೋಪ ಮಾಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮದುವೆಯಾಗುತ್ತೇನೆ ನಂಬಿಸಿ ದೈಹಿಕ ಸಂಪರ್ಕ ಮಾಡಿದ್ದಾನೆ. ಅದಾದ ಬಳಿಕ 2025ರ ಜನವರಿ ತಿಂಗಳಿನಲ್ಲಿ ಮತ್ತೆ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದ. ಆ ಬಳಿಕ ಯುವತಿ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು.
ಇದು ಗೊತ್ತಾದ ಬಳಿಕ ಕೃಷ್ಣ ಮದುವೆಯಾಗಲು ನಿರಾಕರಿಸಿದ್ದ. ಇದರಿಂದಾಗಿ ಪುತ್ತೂರು ಮಹಿಳಾ ಠಾಣೆಗೆ ಯುವತಿ ದೂರು ನೀಡಿದ್ದಳು. ಸದ್ಯ ಪ್ರಕರಣ ದಾಖಲಿಸಿಕೊಂಡು ಕೃಷ್ಣನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದೀಗ ಗರ್ಭಿಣಿಯಾಗಿದ್ದ ಯುವತಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ವರದಿಯಾಗಿದೆ. ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಶುಕ್ರವಾರ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜೂನ್ 24 ರ ರಾತ್ರಿ ದಾಖಲಾದ ದೂರಿನ ಮೇರೆಗೆ ಪುತ್ತೂರು ಪೊಲೀಸರು ಕೃಷ್ಣ ರಾವ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 64 (1) ಮತ್ತು 69 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಸ್ತುತ ಕೃಷ್ಣ ತಲೆಮರೆಸಿಕೊಂಡಿದ್ದು, ಪೊಲೀಸರು ಅವರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.