LATEST NEWS
ಡಾ. ರಶ್ಮಿ ಮೇಲೆ ಗಿರೀಶ್ ಮಟ್ಟಣ್ಣನವರ್ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ
ಮಂಗಳೂರು ಮಾರ್ಚ್ 15: ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ರಶ್ಮಿ ಅವರ ಮೇಲೆ ಆಧಾರ ರಹಿತ ಆರೋಪವನ್ನು ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್ ಹಾಗೂ ಯುಟ್ಯೂಬ್ ಚಾನೆಲ್ ಮಾಡಿದ್ದು, ಈ ಕುರಿತಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಸಿದ್ದು, ಕಾನೂನು ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ಡಾ. ರಶ್ಮಿ ಅವರ ಪತಿ ದಿನೇಶ್ ತಿಳಿಸಿದ್ದಾರೆ.
ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯೆ ಡಾ. ರಶ್ಮೀ ಅವರ ತೆಜೋವಧೆಯನ್ನು ಮಾಡಲಾಗುತ್ತಿದ್ದು, ಅವರ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರ ಪತಿ ದಿನೇಶ್ ದೂರಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಸೌಜನ್ಯ ಹೋರಾಟಕ್ಕೆ ಸಂಬಂಧಿಸಿದಂತೆ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣನವರ್ ಅವರು ಡಾ. ರಶ್ಮ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಯಾರೋ ಪ್ರಸಾದದ ಹಣದಲ್ಲಿ ಮನೆ ನಿರ್ಮಿಸಿದ್ದಾರೆ ಎಂಬ ಹೇಳಿಕೆ ನೀಡಿದ್ದು ಅದನ್ನು ಯುಟ್ಯೂಬ್ ಚಾನೆಲ್ ವೊಂದು ಪ್ರಸಾರ ಮಾಡಿ ತಮ್ಮ ವಿರುದ್ದ ಅಪಪ್ರಚಾರ ನಡೆಸುತ್ತಿದೆ ಎಂದು ಆರೋಪಿಸಿದರು.
ತಾವು ಐಟಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಡಾ. ರಶ್ಮ ಅವರು ಸರಕಾರಿ ವೈದ್ಯೆಯಾಗಿದ್ದಾರೆ. ನಾವು ನಮಗೆ ಬರುವ ಆದಾಯದಲ್ಲಿ ಮನೆಯನ್ನು ಕಟ್ಟಿಕೊಳ್ಳುವಷ್ಟು ಶಕ್ತರಾಗಿದ್ದು, ತಮ್ಮ ಸ್ವಂತ ದುಡಿಮೆಯಿಂದಲೇ ನಾವು ಮನೆ ನಿರ್ಮಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು. ಯುಟ್ಯೂಬ್ ಚಾನೆಲ್ ಒಂದರಲ್ಲಿ ಹಾಕಿರುವ ಸುಳ್ಳು ಮಾಹಿತಿ ಆದರಿಸಿ ಅನಾಮಧೇಯಿ ವ್ಯಕ್ತಿಗಳು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದು, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದಿನೇಶ್ ಆರೋಪಿಸಿದರು. ನಮ್ಮ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಲಾಗುತ್ತಿದ್ದು, ವೈದ್ಯರಾಗಿರುವ ಡಾ. ರಶ್ಮ ಅವರ ಮೇಲೆ ಈ ಆರೋಪಗಳು ಅವರ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತಿದೆ ಎಂದರು. ಈಗಾಗಲೇ ಈ ಕುರಿತಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಾನೂನು ಹೋರಾಟದ ಬಗ್ಗೆ ಚಿಂತನೆ ಮಾಡುತ್ತಿದ್ದೆವೆ ಎಂದು ಈ ಸಂದರ್ಭದಲ್ಲಿ ಹೇಳಿದರು.