DAKSHINA KANNADA
ಗೆಜ್ಜೆಗಿರಿ ಕ್ಷೇತ್ರದ ಮಹಿಮೆ – ಪ್ರಾರ್ಥನೆ ಸಲ್ಲಿಸಿದ 24 ಗಂಟೆಯೊಳಗೆ ಬ್ಯಾನರ್ ಹರಿದವರೇ ತಪ್ಪೊಪ್ಪಿಕೊಂಡರು
ಬೆಳ್ತಂಗಡಿ ಡಿಸೆಂಬರ್ 05:ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟಕ್ಕೆ ಹಾಕಲಾಗಿದ್ದ ಬ್ಯಾನರ್ ಹರಿದ ಪ್ರಕರಣಕ್ಕೆ ಸುಖಾಂತ್ಯಗೊಂಡಿದೆ.
ಮರೋಡಿಯಲ್ಲಿ ಗೆಜ್ಜೆಗಿರಿ ಮೇಳದ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟಕ್ಕೆ ಶುಭ ಕೋರಿ ಹಾಕಲಾಗಿದ್ದ ಬ್ಯಾನರ್ ನ್ನು ಶುಕ್ರವಾರ ರಾತ್ರಿ ಬ್ಯಾನರನ್ನು ಯಾರೋ ಹರಿದು ಹಾಕಿದ್ದು, ಕೆಲವು ಬ್ಯಾನರನ್ನು ಕದ್ದೊಯ್ದಿದ್ದರು. ಇದು ಕಿಡಿಗೇಡಿಗಳ ಕೃತ್ಯವೆಂದು ಮನನೊಂದ ಭಕ್ತರು ಹಾಗೂ ಯಕ್ಷಗಾನ ಆಯೋಜಕರು ಗೆಜ್ಜೆಗಿರಿ ಕ್ಷೇತ್ರ ಹಾಗೂ ಪೊಸರಡ್ಕ ಕ್ಷೇತ್ರದ ದೈವಗಳ ಮೊರೆ ಹೋಗಿ ತಪ್ಪು ಮಾಡಿದವರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮಾಪಣೆ ಕೇಳುವಂತಾಗಬೇಕು ಎಂದು ಪ್ರಾರ್ಥನೆ ಸಲ್ಲಿಸಿದ್ದರು.
ಪ್ರಾರ್ಥನೆ ಸಲ್ಲಿಸಿದ 24 ಗಂಟೆ ಒಳಗೆ ಮರೋಡಿಯ ಮೂವರು ಮಕ್ಕಳು ತಾವು ಈ ಕೆಲಸ ಮಾಡಿದ್ದಾಗಿ ಒಪ್ಪಿಕೊಂಡಿದ್ದು, ಮಕ್ಕಳು ಮಾಡಿದ ಕೃತ್ಯವನ್ನು ಮನ್ನಿಸಬೇಕೆಂದು ಪಾಲಕರು ಕೇಳಿಕೊಂಡ ಹಿನ್ನೆಲೆಯಲ್ಲಿ ಈ ವಿಷಯವನ್ನು ಇಲ್ಲಿಗೆ ಮುಕ್ತಾಯಗೊಳಿಸುವುದಾಗಿ ಯಕ್ಷಗಾನ ಆಯೋಜಕರು ತಿಳಿಸಿದರು. ತಪ್ಪಿತಸ್ಥರು 24 ಗಂಟೆಯೊಳಗೆ ತಮ್ಮ ತಪ್ಪನ್ನು ಒಪ್ಪಿಕೊಂಡದ್ದರಿಂದ ಇದು ಗೆಜ್ಜೆಗಿರಿ ಕ್ಷೇತ್ರದ ಮಹಿಮೆ ಮತ್ತು ಪೊಸರಡ್ಕ ಕ್ಷೇತ್ರದ ದೈವಗಳ ಕಾರ್ಣಿಕ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.