DAKSHINA KANNADA
ನೆಕ್ಕಿಲಾಡಿ – ನಿಲ್ಲಿಸಿದ್ದ ಗ್ಯಾಸ್ ಟ್ಯಾಂಕರ್ ಚಲಿಸಿ ಚರಂಡಿಗೆ ಪಲ್ಟಿ
ಉಪ್ಪಿನಂಗಡಿ ಜನವರಿ 25: ನಿಲ್ಲಿಸಿದ್ದ ಗ್ಯಾಸ್ ಟ್ಯಾಂಕರ್ ಮುಂದಕ್ಕೆ ಚಲಿಸಿ ರಸ್ತೆ ಬದಿ ಚರಂಡಿಗೆ ಉರುಳಿದ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ನೆಕ್ಕಿಲಾಡಿ ಗ್ರಾಮದ ಬೊಳ್ಳಾರು ಎಂಬಲ್ಲಿ ನಡೆದಿದೆ.
ಮಂಗಳೂರಿನಿಂದ ಶಿವಮೊಗ್ಗಕ್ಕೆ ಗ್ಯಾಸ್ ಹೇರಿಕೊಂಡು ಹೋಗುತ್ತಿದ್ದ ಬುಲೆಟ್ ಟ್ಯಾಂಕರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಚಾಲಕ ಕನಕರಾಜು, ಟ್ಯಾಂಕರನ್ನು ಬೊಳ್ಳಾರಿನ ಇಳಿಜಾರು ಪ್ರದೇಶದಲ್ಲಿ ನಿಲ್ಲಿಸಿ ಮೆಕ್ಯಾನಿಕ್‌ನನ್ನು ಕರೆದುಕೊಂಡು ಬರಲು ತೆರಳಿದ್ದರು. ಅವರು ಹೋದ ಕೆಲವೇ ಕ್ಷಣಗಳಲ್ಲಿ ಟ್ಯಾಂಕರ್ ಏಕಾಏಕಿ ಮುಂದಕ್ಕೆ ಚಲಿಸಿ ವಿದ್ಯುತ್ ಕಂಬದ ಮೇಲೆ ಬಿದ್ದಿದೆ. ಗ್ಯಾಸ್ ಸೋರಿಕೆ ಆಗಿಲ್ಲ. ಪುತ್ತೂರು ಅಗ್ನಿಶಾಮಕ ಸಿಬ್ಬಂದಿ, ಉಪ್ಪಿನಂಗಡಿ ಪೊಲೀಸರು ಪರಿಶೀಲನೆ ನಡೆಸಿದರು. ಟ್ಯಾಂಕರ್ ಬಿದ್ದ ಪಕ್ಕದ ವಿದ್ಯುತ್ ಕಂಬದಿಂದ ವಿದ್ಯುತ್ ಸಂಪರ್ಕವನ್ನು ಉಪ್ಪಿನಂಗಡಿ ಮೆಸ್ಕಾಂ ಅಧಿಕಾರಿಗಳು ಕಡಿತಗೊಳಿಸಿದ್ದಾರೆ. ಘಟನೆ ಬಗ್ಗೆ ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.