DAKSHINA KANNADA
ಕಾಶಿಯಲ್ಲಿ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಂದ ಗಂಗಾಸ್ನಾನ

ಮಂಗಳೂರು / ಕಾಶಿ ಮಾರ್ಚ್ 15: ಉತ್ತರಪ್ರದೇಶದ ವಾರಣಾಸಿಯಲ್ಲಿರುವ ಕಾಶಿಮಠದ ಮೂಲಮಠದಲ್ಲಿ ಮೊಕ್ಕಾಂನಲ್ಲಿರುವ ಕಾಶೀಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಮಠದ ಆರಾಧ್ಯ ದೇವರಾಗಿರುವ ಶ್ರೀ ವೇದವ್ಯಾಸ ದೇವರ ಮೂರ್ತಿಯನ್ನು ಹೊತ್ತು ಗಂಗಾಸ್ನಾನವನ್ನು ಮಾಡಿದರು.
ವಾರಣಾಸಿಯಲ್ಲಿರುವ ಮೂಲಮಠದಲ್ಲಿ ವೃಂದಾವನಸ್ಥರಾಗಿರುವ ಕಾಶೀಮಠದ ಗುರುಪರಂಪರೆಯ ಮೂರನೇ ಯತಿ ಶ್ರೀಮದ್ ಉಪೇಂದ್ರ ತೀರ್ಥ ಸ್ವಾಮೀಜಿಯವರ 350 ಪುಣ್ಯತಿಥಿ ಹಾಗೂ ಐದನೇ ಯತಿ ಶ್ರೀಮದ್ ರಾಘವೇಂದ್ರ ತೀರ್ಥ ಸ್ವಾಮೀಜಿಯವರ 300 ನೇ ಪುಣ್ಯತಿಥಿ ಆಚರಣೆಯ ಅಂಗವಾಗಿ ಮೂಲಮಠಕ್ಕೆ ಚಿತ್ತೈಸಿರುವ ಶ್ರೀಗಳು ಮಠದ ದೇವರಿಗೆ ಪೂಜೆಯನ್ನು ಸಲ್ಲಿಸಿ ಭಾರತದ ವಿವಿಧ ರಾಜ್ಯಗಳಿಂದ ಆಗಮಿಸಿರುವ ಭಕ್ತರನ್ನು ಅನುಗ್ರಹಿಸಿದರು.

ಕಾಶಿಯ ಬ್ರಹ್ಮಘಾಟ್ ನಲ್ಲಿ ಕಾಶಿಮಠದ ಮೂಲಮಠ ಗಂಗಾನದಿಯ ದಡದಲ್ಲಿದ್ದು, ಇಲ್ಲಿ ಮೊಕ್ಕಾ ಮಾಡುವ ಕಾಶೀಮಠಾಧೀಶರು ಮಠದ ದೇವರ ಸಹಿತ ಗಂಗಾಸ್ನಾನ ಮಾಡುವ ಸಂಪ್ರದಾಯ ಅನಾದಿಕಾಲದಿಂದ ಜಾರಿಯಲ್ಲಿದೆ. ಇಂತಹ ಪುಣ್ಯ ಸಂದರ್ಭದಲ್ಲಿ ಶ್ರೀಗಳೊಂದಿಗೆ ಗುಜರಾತ್ ಐಎಎಸ್ ಅಧಿಕಾರಿ ಡಾ. ವಿನೋದ್ ರಾವ್, ಮುಂಬೈ ಜಿಎಸ್ ಬಿ ಸೇವಾ ಮಂಡಲದ ಪ್ರಮುಖರಾದ ದೀಪಕ್ ಭಾಸ್ಕರ್ ಶೆಣೈ, ಮಂಗಳೂರು ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಸಿಎ ಜಗನ್ನಾಥ್ ಕಾಮತ್, ಮುಖಂಡರಾದ ನಿತಿನ್ ಪ್ರಭು, ಜಯಂತ ಪ್ರಭು, ರಾಜೀವ್ ವಾದ್ಯಾರ್, ಮನೋಹರ್ ನಾಯಕ್, ಚೆಂಪಿ ಉಮೇಶ್ ಭಟ್, ವೈದಿಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.