DAKSHINA KANNADA
ಗಣಪತಿ ಭಟ್ ನೆಲ್ಲಿತೀರ್ಥರಿಗೆ ವಿಪ್ರಭೂಷಣ ಪ್ರಶಸ್ತಿ

ಮಂಗಳೂರು: ಅಶ್ವತ್ಥಪುರ ನಾರಾಯಣಾನಂದ ಸರಸ್ವತಿ ಸ್ವಾಮಿ ಟ್ರಸ್ಟ್ ವತಿಯಿಂದ ನೀಡಲಾಗುವ ವಿಪ್ರಭೂಷಣ ಪ್ರಶಸ್ತಿಗೆ ಈ ಬಾರಿ ವೇ.ಮೂ.ಶ್ರೀ ಗಣಪತಿ ಭಟ್ ನೆಲ್ಲಿತೀರ್ಥ ಆಯ್ಕೆಯಾಗಿದ್ದಾರೆ.
ಶ್ರೀ ಗಣಪತಿ ಭಟ್ ಅವರು ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಸೋಮನಾಥೇಶ್ವರ ಗುಹಾಲಯ ನೆಲ್ಲಿತೀರ್ಥ ಇಲ್ಲಿ ಕಳೆದ ಮೂವತ್ತು ವರ್ಷಗಳಿಂದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜುಲೈ 27 ರಂದು ಸಂಜೆ 4 ಗಂಟೆಗೆ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಸಾವಿತ್ರಿ ಸಭಾ ಸದನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟಿ ಕೆ.ವೈ.ಲಕ್ಷ್ಮೀ ತಿಳಿಸಿದ್ದಾರೆ.
ಅಶ್ವತ್ಥಪುರ ಕ್ಷೇತ್ರ ಆಡಳಿತ ಮೋಕ್ತೇಸರ ಶ್ರೀ ಕೃಷ್ಣಮೂರ್ತಿ ವಿ.ಎ., ಬೆಂಗಳೂರಿನ ಯುವ ಉದ್ಯಮಿ ಹಾಗೂ ಆರ್ಥಿಕ ಸಲಹೆಗಾರ ಶ್ರೀಕಾಂತ್ ಎಂ.ಜಿ., ತೆಂಕಮಿಜಾರು ಗ್ರಾಮ ಪಂಚಾಯತ್ ಸದಸ್ಯರಾದ ಬಿ.ಎಲ್. ದಿನೇಶ್ ಕುಮಾರ್ ಭಾಗವಹಿಸುವರು.

ಗೌರವ ಸನ್ಮಾನ: ಇದೇ ಸಂದರ್ಭ ವೇ.ಮೂ.ಪ್ರಭಾಕರ ಭಟ್ ಕಂಚಿಬೈಲು ,ಮಾಯಣ ಗೋಪಾಲಕೃಷ್ಣ ರಾವ್ ಉಡುಪಿ, ಶಂಕರ ರಾವ್ ವರ್ಕು, ಹಾಗೂ ಸದಾಶಿವ ರಾವ್ ನೆಲ್ಲಿಮಾರು ಇವರಿಗೆ ಗೌರವ ಸನ್ಮಾನ ನಡೆಯಲಿದೆ.
ಯಕ್ಷಗಾನ ಪ್ರದರ್ಶನ: ಬಳಿಕ ಭರತ್ ರಾಜ್ ಪರ್ಕಳ ನಿರ್ದೇಶನದಲ್ಲಿ ಸೃಷ್ಟಿ ಕಲಾ ವಿದ್ಯಾಲಯ ಬೆಂಗಳೂರು ತಂಡದಿಂದ ‘ಅಭಿಮನ್ಯು ಕಾಳಗ’ ಕಾಲಮಿತಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.