LATEST NEWS
ಮಂಗಳೂರಿನಲ್ಲಿ ಪ್ರಾಯೋಗಿಕವಾಗಿ ಗೈಲ್ ನಿಂದ ಮನೆಗಳಿಗೆ ಪೈಪ್ ಲೈನ್ ಗ್ಯಾಸ್
ಮಂಗಳೂರು ಅಕ್ಟೋಬರ್ 06 : ಪೈಪ್ ಲೈನ್ ಮೂಲಕ ಗ್ಯಾಸ್ ಒದಗಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ಗೈಲ್ ಕಂಪೆನಿ ಈಗಾಗಲೇ ಪ್ರಾಯೋಗಿಕ ಹಂತದಲ್ಲಿ ಕೆಲವು ಮನೆಗಳಿಗೆ ಒದಗಿಸಿದ್ದು, ಮುಂದಿನ ದಿನಗಳಲ್ಲಿ ಸುರತ್ಕಲ್, ಮುಕ್ಕ, ಮೂಲ್ಕಿ, ಕುಳಾಯಿ, ಬೋಂದೆಲ್ ಪ್ರದೇಶಕ್ಕೆ ಪಿಎನ್‌ಜಿ ಸಂಪರ್ಕ ನೀಡಲು ನಿರ್ಧರಿಸಲಾಗಿದೆ ಎಂದು ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ. ಆಸಕ್ತರು ಪಿಎನ್‌ಜಿ ಮಿತ್ರ ಆ್ಯಪ್‌ನ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದೂ ತಿಳಿಸಲಾಗಿದೆ.
ಗೈಲ್ ಗ್ಯಾಸ್ ಕಂಪೆನಿ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಿಎನ್‌ಜಿ ಒದಗಿಸುವ ಜವಾಬ್ದಾರಿ ಹೊತ್ತಿದ್ದು, ಈಗಾಗಲೇ 13 ಕೈಗಾರಿಕೆ ಘಟಕಗಳಿಗೆ ಪೂರೈಕೆ ಆರಂಭಿಸಿದೆ ಹಾಗೂ 18 ಸಿಎನ್‌ಜಿ ಸ್ಟೇಷನ್‌ಗಳನ್ನು ಕಾರ್ಯಾರಂಭಿಸಿದೆ. ಜಿಲ್ಲೆಯಲ್ಲಿ 2019ರಲ್ಲಿ ಸಿಟಿ ಗ್ಯಾಸ್ ವಿತರಣೆ ಗುತ್ತಿಗೆಯನ್ನು ಗೈಲ್ ಗ್ಯಾಸ್‌ಗೆ ನೀಡಲಾಗಿದ್ದು ವಿತರಣ ಜಾಲ ಹಾಕುವ ಕಾಮಗಾರಿ ನಿಧಾನವಾಗಿ ಸಾಗುತ್ತಿದೆ. ಮುಖ್ಯವಾಗಿ ಮನೆಗಳಿಗೆ ಪೈಪ್‌ಲೈನ್ ಮೂಲಕ ಪೂರೈಕೆ, ವಾಣಿಜ್ಯ ಮತ್ತು ಕೈಗಾರಿಕೆ ಘಟಕಗಳಿಗೆ ವಿತರಣೆ ಹಾಗೂ ಸಿಎನ್‌ಜಿ ವಾಹನಗಳಿಗೆ ದೊರಕುವಂತಾಗಲು ಸ್ಟೇಷನ್‌ಗಳ ಮೂಲಕ ವಿತರಣೆ ಇದರ ಮುಖ್ಯ ಭಾಗವಾಗಿದೆ.
ಮುಂದಿನ 8 ವರ್ಷಗಳಲ್ಲಿ ಜಿಲ್ಲೆಯಾದ್ಯಂತ 100 ಸಿಎನ್‌ಜಿ ಸ್ಟೇಷನ್‌ಗಳನ್ನು ಆರಂಭಿಸಲಾಗುವುದು, ಪುತ್ತೂರು, ಸುಳ್ಯ, ನೆಲ್ಯಾಡಿಯಂತಹ ಜಾಗದಲ್ಲೂ ಸಿಎನ್‌ಜಿ ಲಭಿಸುವಂತಾಗಲಿದೆ. ಜಿಲ್ಲಾದ್ಯಂತ ಮುಂದಿನ ದಿನಗಳಲ್ಲಿ 3.50 ಲಕ್ಷ ಮನೆಗಳಿಗೆ ಈ ಸುರಕ್ಷಿತ ಅನಿಲ ಪೂರೈಕೆ ನೀಡಲಾಗುವುದು. ಅಲ್ಲದೆ ಪಿಎನ್‌ಜಿ (ಪೈಪ್ಡ್ ನ್ಯಾಚುರಲ್ ಗ್ಯಾಸ್) ಪೂರೈಕೆ ಕುರಿತು ಒಪ್ಪಂದ ಮಾಡಿಕೊಂಡಿದೆ. 1,10,000 ಮಂದಿ ನಾಗರಿಕರು ಮನೆಗಳು, ಫ್ಲ್ಯಾಟ್‌ಗಳು, ಅಪಾರ್ಟ್‌ಮೆಂಟ್‌ಗಳಿಗೆ ಸಿಎನ್‌ಜಿ ಪಡೆಯಲು ನೋಂದಾಯಿಸಿಕೊಂಡಿದ್ದಾರೆ.