LATEST NEWS
ಬುದ್ದಿವಂತರ ಜಿಲ್ಲೆ ಉಡುಪಿಯಲ್ಲಿ ಮಳೆಗಾಗಿ ಕಪ್ಪೆ ಮದುವೆ
ಬುದ್ದಿವಂತರ ಜಿಲ್ಲೆ ಉಡುಪಿಯಲ್ಲಿ ಮಳೆಗಾಗಿ ಕಪ್ಪೆ ಮದುವೆ
ಉಡುಪಿ ಜೂನ್ 8: ಭಾರಿ ಪ್ರಮಾಣದ ಮಳೆ ಕೊರತೆ ಎದುರಿಸುತ್ತಿರುವ ಉಡುಪಿ ಜಿಲ್ಲೆಯಲ್ಲಿ ಮಳೆಗಾಗಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಮತ್ತು ಪಂಚರತ್ನಾ ಸೇವಾ ಟ್ರಸ್ಟ್ ಕಪ್ಪೆ ಮದುವೆಯನ್ನು ಆಯೋಜನೆ ಮಾಡಿತ್ತು. ಬುದ್ದಿವಂತರ ಜಿಲ್ಲೆಯಲ್ಲಿ ಮಳೆಗಾಗಿ ಕಪ್ಪೆ ಮದುವೆ ಎನ್ನುವುದು ವಿಶೇಷವಾಗಿತ್ತು.
ಈಗಾಗಲೇ ಕುಡಿಯುವ ನೀರಿನ ಭಾರಿ ಅಭಾವ ಎದುರಿಸುತ್ತಿರುವ ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಇನ್ನು ಮಳೆ ಕೊರತೆಯನ್ನು ಎದುರಿಸುತ್ತಿದೆ. ಉಡುಪಿ ಜಿಲ್ಲೆಯನ್ನು ಭಾಗಶಃ ಬರ ಪೀಡಿತ ಜಿಲ್ಲೆ ಎಂದು ಘೋಷಿಸಲಾಗಿದೆ.
ಸಾಮಾನ್ಯವಾಗಿ ಬರುವ ಪೂರ್ವ ಮುಂಗಾರು ಮಳೆ ಕೂಡ ಈ ಬಾರಿ ಉಡುಪಿ ಜಿಲ್ಲೆಯಲ್ಲಿ ಬರದೆ ಇರುವುದರಿಂದ ಉಡುಪಿ ಜಿಲ್ಲೆ ಬರ ಪೀಡಿತವಾಗಿದ್ದು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ.
ಈ ನಡುವೆ ಮಳೆಗಾಗಿ ರಾಜ್ಯಾದ್ಯಂತ ಮುಜರಾಯಿ ದೇವಸ್ಥಾನಗಳಲ್ಲಿ ರಾಜ್ಯ ಸರಕಾರ ಪರ್ಜನ್ಯ ಜಪ ನಡೆಸಿ ಪ್ರಾರ್ಥನೆ ಕೂಡ ಮಾಡಿತ್ತು.
ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಉಡುಪಿ ಜಿಲ್ಲೆಯ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಮತ್ತು ಪಂಚರತ್ನಾ ಸೇವಾ ಟ್ರಸ್ಟ್ ಕಪ್ಪೆ ಮದುವೆಯನ್ನು ಆಯೋಜನೆ ಮಾಡಿತ್ತು. ಮಧ್ಯಾಹ್ನ 12.05ಕ್ಕೆ ಕಿದಿಯೂರು ಹೊಟೇಲ್ ವಾಹನ ನಿಲುಗಡೆ ಪ್ರಾಂಗಣದಲ್ಲಿ ಈ ವಿಶಿಷ್ಟ ಮದುವೆ ನಡೆಯಿತು. ಇದಕ್ಕೂ ಮುನ್ನ .ನಗರದ ಪ್ರಮುಖ ರಸ್ತೆಗಳಲ್ಲಿ ಕಪ್ಪೆ ಮದುವೆಯ ದಿಬ್ಬಣ ಸಾಗಿಬಂದಿದ್ದು , ಉಡುಪಿಯ ಜನರ ಗಮನ ಸೆಳೆಯಿತು.
ಸ್ವಸ್ತಿಶ್ರೀ ವಿಕಾರಿ ಸಂವತ್ಸರ ಮಿಥುನಮಾಸ ದಿನ 24 ಸಲುವ ಜ್ಯೇಷ್ಠ ಶುದ್ಧ 6 ಯು ದಿನಾಂಕ 08-06-2019ನೇ ಶನಿವಾರ ದಿನಾ ಗಂಟೆ 12.05ಕ್ಕೆ ಒದಗುವ ಸಿಂಹಲಗ್ನ ಸುಮುಹೂರ್ತದಲ್ಲಿ ಉಡುಪಿ ಕಲ್ಸಂಕದ ಸುಪುತ್ರ ಚಿ.ವರುಣ ಮತ್ತು ಕೊಳಲಗಿರಿ ಕೀಳಿಂಜೆಯ ಸುಪುತ್ರಿ ಚಿ.ಸೌ.ವರ್ಷ ವಿವಾಹ ಮಹೋತ್ಸವ ನಡೆಯಲಿದ್ದು, ತಾವೆಲ್ಲರೂ ಬಂಧುಮಿತ್ರರೊಡಗೂಡಿ ಆಗಮಿಸಬೇಕು, ಮಳೆಗಾಗಿ ಪ್ರಾರ್ಥಿಸಬೇಕು…ಇದು ಮಳೆ ಬಂದು ಜಲಕ್ಷಾಮ ನಿವಾರಣೆಗಾಗಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್, ಪಂಚರತ್ನಾ ಸೇವಾ ಟ್ರಸ್ಟ್ ಆಯೋಜಿಸಿರುವ ಮಂಡೂಕ ಕಲ್ಯಾಣೋತ್ಸವ (ಕಪ್ಪೆ ಮದುವೆ)ದ ಆಮಂತ್ರಣ ಪತ್ರಿಕೆಯ ಒಕ್ಕಣೆ. ಹೌದು. ವರ್ಷಂಪ್ರತಿ ಜಲಕ್ಷಾಮ ನಿವಾರಣೆಗಾಗಿ ಕಪ್ಪೆಗಳಿಗೆ ಮದುವೆ ಮಾಡಿ ಸುದ್ದಿಯಾಗುವ ಉಡುಪಿಯ ನಿತ್ಯನಂದ ಒಳಕಾಡು ,ಈ ಬಾರಿಯೂ ಕಪ್ಪೆ ಮದುವೆ ಮಾಡಿ ಗಮನ ಸೆಳೆದರು.
ಕೊಳಲಗಿರಿ ಕೀಳಿಂಜೆಯಿಂದ ಹೆಣ್ಣು ಕಪ್ಪೆ ಮತ್ತು ಉಡುಪಿ ಕಲ್ಸಂಕದಿಂದ ಗಂಡು ಕಪ್ಪೆಯನ್ನು ತರಲಾಗಿತ್ತು. ಹೆಣ್ಣು ಕಪ್ಪೆಗೆ ‘ವರ್ಷಾ’ ಎಂದೂ, ಗಂಡು ಕಪ್ಪೆಗೆ ‘ವರುಣ’ ಎಂದೂ ನಾಮಕರಣ ಮಾಡಲಾಗಿತ್ತು. ‘ಮಳೆಗಾಗಿ ಪ್ರಾರ್ಥನೆಯೇ ಉಡುಗೊರೆ’ಎಂಬ ಒಕ್ಕಣೆಯ ಮದುವೆ ಆಮಂತ್ರಣ ಪತ್ರಿಕೆಯನ್ನೂ ಹಂಚಿ ವಿಧಿಬದ್ಧವಾಗಿ ಕಪ್ಪೆ ಮದುವೆ ನಡೆಸಲಾಯಿತು. ಮಳೆ ಬರಲು ಉಡುಪಿಯಲ್ಲಿ ಜಿಲ್ಲಾ ನಾಗರಿಕ ವೇದಿಕೆ ವತಿಯಿಂದ ವರ್ಷಗಳ ಹಿಂದೆಯೂ ಕಪ್ಪೆಗೆ ಮದುವೆ ಮಾಡುತ್ತಿದೆ.