DAKSHINA KANNADA
ಪಡಿತರ ಅಕ್ಕಿ 10 ರೂ.ಗೆ ಮಾರಾಟ!, 20 ಕ್ವಿಂಟಾಲ್ ಅಕ್ಕಿ ಸಹಿತ ಓರ್ವ ವಶಕ್ಕೆ
ಕಾರ್ಕಳ, ಜೂನ್ 02: ಬಡವರಿ ಉಚಿತವಾಗಿ ಸರಕಾರ ವಿತರಿಸುವ ಪಡಿತರ ಅಕ್ಕಿಯನ್ನು ಮನೆಮನೆಗೆ ತೆರಳಿ ಹಣ ನೀಡಿ ಸಂಗ್ರಹಿಸಿ ಅದನ್ನು ಅಧಿಕ ಹಣಕ್ಕೆ ಮಾರಲು ಯತ್ನಿಸುತ್ತಿದ್ದ ಕೃತ್ಯವನ್ನು ನೀರೆ ಗ್ರಾಮ ಪಂಚಾಯತ್ ಪತ್ತೆ ಹಚ್ಚಿದೆ.
ಆರೋಪಿ ಬೈಲೂರಿನ ಮೊಹಮ್ಮದ್ ಅಬ್ದುಲ್ ರಹಿಮನ್‌ನನ್ನು ಪೊಲೀಸರು ಬಂಧಿಸಿದ್ದು, 20 ಕ್ವಿಂಟಾಲ್ ಅಕ್ಕಿ ಮತ್ತು ಸಾಗಾಟಕ್ಕೆ ಬಳಸಿದ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನೀರೆ ಗ್ರಾ.ಪಂ.ನ ಕಣಜಾರು ಶೆಮೆಗುರಿಯಲ್ಲಿ ಘಟನೆ ಬುಧವಾರ ವ್ಯಕ್ತಿಯೋರ್ವ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ವಾಹನದಲ್ಲಿ ಸಾಗಿಸುತ್ತಿರುವುದು ಪಂಚಾಯತ್ ಸದಸ್ಯ ಸಚ್ಚಿದಾನಂದ ಪ್ರಭು ಅವರ ಗಮನಕ್ಕೆ ಬಂದಿದ್ದರಿಂದ ತಕ್ಷಣ ಪಿಡಿಒ ಅಂಕಿತಾ ಅವರ ಗಮನಕ್ಕೆ ತಂದರು. ಪಿಡಿಒ ತಹಶೀಲ್ದಾರ್‌ಗೆ ಮತ್ತು ಹಿರಿಯಡಕ ಠಾಣೆಗೆ ಮಾಹಿತಿ ರವಾನಿಸಿದರು.
ನೀರೆ ಹಾಗೂ ಕಣಜಾರು ಗ್ರಾಮಗಳ ಬಿಪಿಎಲ್ ಕುಟುಂಬದವರಿಗೆ ತಿಂಗಳಿಗೆ 50 ಕೆಜಿ ಅಕ್ಕಿ ಸಿಗುತ್ತಿದ್ದು, ಕೆಲವರು ಅದನ್ನು ಈ ವ್ಯಕ್ತಿಗೆ ನೀಡಿ ಕೆಜಿಗೆ 10 ರೂ.ಗಳಂತೆ ಹಣ ಪಡೆಯುತ್ತಿದ್ದರು. ಆತ ಈ ಅಕ್ಕಿಯನ್ನು ಮಿಲ್‌ನಲ್ಲಿ ಪಾಲಿಷ್ ಮಾಡಿಸಿ ಕುಚ್ಚಲಕ್ಕಿಯನ್ನಾಗಿ ಪರಿವರ್ತಿಸಿ ಅಧಿಕ ಬೆಲೆಗೆ ಮಾರುತ್ತಿದ್ದ ಎನ್ನುವುದು ಬೆಳಕಿಗೆ ಬಂದಿದೆ.
ಈ ದಂಧೆಯಲ್ಲಿ ತೊಡಗಿಸಿಕೊಂಡಿರುವ ಹಲವರು ಮಂದಿ ತಾಲೂಕು ವ್ಯಾಪ್ತಿಯಲ್ಲಿ ಕಾರ್ಯಚರಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ. ಫುಡ್ ಇನ್‌ಸ್ಪೆಕ್ಟರ್ ಸುಮತಿ ಭೇಟಿ ನೀಡಿ ಕೇಸ್ ದಾಖಲಿಸಿದ್ದಾರೆ. ನೀರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಲಿನಿ. ಉಪಾಧ್ಯಕ್ಷ ಸತೀಶ್ ಸದಸ್ಯರು ಶಿವಪ್ರಸಾದ್,ವಿದ್ಯಾ, ಮಾಜಿ ಸದಸ್ಯರು ರಘುರಾಮ್ ಶೆಟ್ಟಿ , ಗ್ರಾಮ ಕಾರಣಿಕ ಸುಚಿತ್ರಾ ಸ್ಥಳೀಯ ಗ್ರಾಮಸ್ಥರಾದ ಯೋಗೀಶ್ ಮಡಿವಾಳ್ ಸ್ಥಳದಲ್ಲಿದ್ದರು. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕೇಸುದಾಖಲಾಗಿದೆ.