DAKSHINA KANNADA
ಕಾರ್ಯಕರ್ತರ ಮುಂದೆ ಬಿಜೆಪಿ ರಾಜ್ಯಾಧ್ಯಕ್ಷನಾದ ಕಥೆ ಹೇಳಿದ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಪುತ್ತೂರು, ನವೆಂಬರ್ 28: ಪುತ್ತೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕರ್ತರ ಮುಂದೆ ಬಿಜೆಪಿ ರಾಜ್ಯಾಧ್ಯಕ್ಷನಾದ ಕಥೆ ಹೇಳಿದ್ದಾರೆ.
ಕನಸಿನಲ್ಲಿ ಬಂದು ಹೇಳಿದಂತೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿತ್ತು, ಆವತ್ತು ಕೇರಳ ರಾಜ್ಯದ ಪ್ರಭಾರಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದೆ. ಒಂದು ದಿನ ತಿರುವನಂತಪುರಂ ನಲ್ಲಿ ಪಕ್ಷದ ಕಾರ್ಯಕಾರಿಣಿ ಸಭೆಗೆ ಹಾಜರಾಗಲು ರಾತ್ರಿ ಹೊರಟಿದ್ದೆ, ರಾತ್ರಿ 2 ಗಂಟೆಗೆ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಮೊಬೈಲ್ ಗೆ ಕರೆ ಮಾಡಿದ್ದರು, ನಿದ್ದೆಯಿಂದ ಎದ್ದು ಕರೆ ಸ್ವೀಕರಿಸಿದ್ದೆ, ನಿನ್ನನ್ನು ರಾಜ್ಯಾಧ್ಯಕ್ಷನಾಗಿ ಆಯ್ಕೆ ಮಾಡಲಾಗಿದೆ ಎಂದರು.

ಬೇಡ ಎನ್ನಲು ಅವಕಾಶವನ್ನೇ ನೀಡಲಿಲ್ಲ, ತಕ್ಷಣವೇ ಫೋನ್ ಕಟ್ ಮಾಡಿದ್ದರು. ಕನಸು ಕಂಡಿರಬೇಕು ಎಂದು ಬೆಳಗ್ಗೆ ತಿರುವನಂತಪುರಂ ಮುಟ್ಟಿದೆ. ಆ ಸಂದರ್ಭದಲ್ಲಿ ಎಲ್ಲಾ ಮಾಧ್ಯಮಗಳಲ್ಲಿ ನಾನು ರಾಜ್ಯಾಧ್ಯಕ್ಷನಾಗಿ ಆಯ್ಕೆಯಾದ ಸುದ್ಧಿ ಬಂದಿತ್ತು.
ಆ ಬಳಿಕ ಹೋಗಿ ರಾಜ್ಯಾಧ್ಯಕ್ಷ ಪದಗ್ರಹಣ ಸ್ವೀಕರಿಸಿದೆ, ಪಕ್ಷದ ಹಿರಿಯರು ನಾನು ಮಾಸ್ ಲೀಡರ್ ಆಗಲು ಹೇಳಿಲ್ಲ. ಪಕ್ಷವನ್ನು ಮಾಸ್ ಕಡೆಗೆ ಕೊಂಡೊಯ್ಯುವಂತೆ ಸೂಚಿಸಿದ್ದರು, ಅದನ್ನೇ ಮಾಡಿದ್ದೇನೆ ಎಂದು ಪುತ್ತೂರಿನಲ್ಲಿ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.