ಬೆಂಗಳೂರು, ಮಾರ್ಚ್ 27: ಆನ್ಲೈನ್ ಫುಡ್ ಡೆಲಿವರಿ ಸೇವೆಗಳಲ್ಲಿ ಡೆಲಿವರಿ ಚಾರ್ಜ್, ಪ್ಯಾಕಿಂಗ್ ಶುಲ್ಕ, ಪ್ಲಾಟ್ಫಾರ್ಮ್ ಫೀ, ಜಿಎಸ್ಟಿ ಸೇರಿದಂತೆ ಹಲವು ವಿಧದ ಹೆಚ್ಚುವರಿ ಶುಲ್ಕಗಳು ಸೇರಿಸುವುದು ಸಾಮಾನ್ಯವಾಗಿದೆ. ಆಹಾರದ ಮೂಲ ಬೆಲೆಯನ್ನೇ ಮೀರಿ ಹೋಗುತ್ತಿರುವುದರಿಂದ ಗ್ರಾಹಕರ ಅಸಮಾಧಾನ ಹೆಚ್ಚುತ್ತಿದೆ. ಅದು ಇದೀಗ ಮಾಜಿ ಸಂಸದೆ ಸುಮಲತಾ ಅಂಬರೀಶ್ ಆರ್ಡರ್ ಮಾಡಿದ್ದ ಪೊಂಗಲ್ ದರಕ್ಕಿಂತ ಹೆಚ್ಚು ಇತರೆ ಶುಲ್ಕು ವಿಧಿಸಿದ ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಶ್ ಅಸಮಾಧಾನ ಹೊರಹಾಕಿದ್ದು, ಆಹಾರದ ಮೂಲ ಬೆಲೆಗೆ ಹೋಲಿಸಿದರೆ ಅತಿಯಾದ ಡೆಲಿವರಿ ಹಾಗೂ ಇತರೆ ಶುಲ್ಕಗಳನ್ನು ವಿಧಿಸಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.
ಸುಮಲತಾ ಅಂಬರೀಶ್ ಅವರು ರಾಮೇಶ್ವರಂ ಕೆಫೆಯಿಂದ ಪೊಂಗಲ್ ಆರ್ಡರ್ ಮಾಡಿದ್ದರು. ಆರ್ಡರ್ ಮಾಡಿದ ಆಹಾರದ ಮೂಲ ಬೆಲೆ 115 ರೂಪಾಯಿ ಮಾತ್ರವಾಗಿದ್ದರೂ, ಸ್ವಿಗ್ಗಿ ಐಟಂ ಹಾಗೂ ಇತರೆ ಶುಲ್ಕ ಸೇರಿಸಿ ಒಟ್ಟು 273 ರೂ. ವಸೂಲಿ ಮಾಡಿದೆ. ಅಂದರೆ ಮೂಲ 115 ರೂಪಾಯಿಯ ಪೊಂಗಲ್ಗೆ 158 ರೂ. ಶುಲ್ಕ ವಿಧಿಸಲಾಗಿದೆ. ಇದರಿಂದ ಆಹಾರದ ಬೆಲೆಯಿಗಿಂತಲೂ ಹೆಚ್ಚು ಮೊತ್ತವನ್ನು ಡೆಲಿವರಿ ಹಾಗೂ ಇತರೆ ಶುಲ್ಕಗಳ ಹೆಸರಿನಲ್ಲಿ ಪಡೆಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಸಿದ್ದಾರೆ.
ಈ ಕುರಿತು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, 115 ರೂಪಾಯಿಯ ಪೊಂಗಲ್ಗೆ 273 ಯಾಕೆ? ಆಹಾರದ ಬೆಲೆಯಿಗಿಂತ ಡಬಲ್ ಚಾರ್ಜ್ ಮಾಡುವುದು ಸರಿಯೇ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ಗ್ರಾಹಕರಿಗೆ ಪಾರದರ್ಶಕ ಬೆಲೆ ಮಾಹಿತಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸುಮಲತಾ ಅವರ ಪೋಸ್ಟ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರು ತಮ್ಮದೇ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ. ಹಲವರು ತಮ್ಮ ಅನುಭವಗಳನ್ನು ಹಂಚಿಕೊಂಡು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದಾಗಿ ತಿಳಿಸಿದ್ದಾರೆ. ಕೆಲವರು ಫುಡ್ ಡೆಲಿವರಿ ಕಂಪನಿಗಳು ಪಾರದರ್ಶಕ ದರ ವ್ಯವಸ್ಥೆಯನ್ನು ಅನುಸರಿಸಬೇಕು ಎಂದು ಒತ್ತಾಯಿಸಿದ್ದಾರೆ.