KARNATAKA
ಆಮ್ ಆದ್ಮಿ ಪಕ್ಷ ಸೇರಲಿದ್ದಾರಂತೆ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್
ಬೆಂಗಳೂರು, ಎಪ್ರಿಲ್ 04: ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಆಮ್ ಆದ್ಮಿ ಪಕ್ಷ ಸೇರಲಿದ್ದು, ಸೋಮವಾರ ಹೊಸದಿಲ್ಲಿಯಲ್ಲಿ ಅಧಿಕೃತವಾಗಿ ಘೋಷಿಸಲಿದ್ದಾರೆ.
ಬೆಳಗ್ಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದಲ್ಲಿ ಸಭೆ ನಡೆಯಲಿದ್ದು, ಮಧ್ಯಾಹ್ನ ಜರಗಲಿರುವ ಪತ್ರಿಕಾಗೋಷ್ಠಿಯಲ್ಲಿ ಕೇಜ್ರಿವಾಲ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ಬಗ್ಗೆ ವಿಜಯ್ ಭಾಸ್ಕರ್ ಪ್ರಕಟಿಸಲಿದ್ದಾರೆ ಎಂದು ಹೇಳಲಾಗಿದೆ.
ಈ ಸಂದರ್ಭದಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಗೋವಾ, ಉತ್ತರಾಖಂಡ ಮುಂತಾದ ರಾಜ್ಯಗಳ ಮುಖಂಡರು ಉಪಸ್ಥಿತರಿರುತ್ತಾರೆ. ಅದಾದ ಬಳಿಕ ವಿಜಯಭಾಸ್ಕರ್ ಪಂಜಾಬ್ ರಾಜ್ಯಕ್ಕೂ ಭೇಟಿ ಕೊಡಲಿದ್ದು, ಅಲ್ಲಿನ ಮುಖ್ಯಮಂತ್ರಿ ಭಗವಂತ ಮಾನ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲಿಂದ ಮರಳಿದ ಬಳಿಕ ಬುಧವಾರ ಬೆಂಗಳೂರಿನಲ್ಲಿ ವಿಜಯ್ ಭಾಸ್ಕರ್ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ರಾಜ್ಯ ಆಪ್ ಮುಖಂಡರು ಮಾಹಿತಿ ನೀಡಿದ್ದಾರೆ.
ರಾಜಕೀಯದತ್ತ ಒಲವು ತೋರಿದ್ದ ವಿಜಯ್ ಭಾಸ್ಕರ್ ಆರು ತಿಂಗಳ ಹಿಂದೆ ಐಪಿಎಸ್ ಹುದ್ದೆಗೆ ಸ್ವಯಂ ನಿವೃತ್ತಿ ಘೋಷಿಸಿದ್ದರು. ಕಾಂಗ್ರೆಸ್ ಪಕ್ಷದಿಂದ ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ಅವರು ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಟಿಕೆಟ್ ನೀಡಲು ಕಾಂಗ್ರೆಸ್ ಪಕ್ಷದಲ್ಲೂ ಒಂದು ಹಂತದ ಸಹಮತ ಇತ್ತು.
ಈ ಮಧ್ಯೆ, ಆಮ್ ಆದ್ಮಿ ಪಕ್ಷದತ್ತ ಚಿತ್ತ ಹರಿಸಿದ್ದು, ಪಕ್ಷ ಸೇರಲು ಮುಂದಾಗಿದ್ದಾರೆ. ಕರ್ನಾಟಕದ ಪೂರ್ಣ ನಾಯಕತ್ವ ನೀಡುವ ಬಗ್ಗೆ ವಿಜಯ್ ಭಾಸ್ಕರ್ ಅವರಿಗೆ ಅರವಿಂದ ಕೇಜ್ರಿವಾಲ್ ಭರವಸೆ ನೀಡಿದ್ದಾರೆ. ಬಸವನಗುಡಿ ಕ್ಷೇತ್ರದಿಂದ ಅವರು ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದೆ.