DAKSHINA KANNADA
ವನ್ಯಜೀವಿ ಅಧಿಕಾರಿಗಳಿಗೆ ದಿಗ್ಭಂಧನ
ಸುಳ್ಯ,ಸೆಪ್ಟಂಬರ್ 22: ಸುಳ್ಯ ತಾಲೂಕಿನ ಕಲ್ಮಕಾರು ಹಾಗೂ ಬಾಳುಗೋಡು ಗ್ರಾಮಗಳನ್ನು ಪುಷ್ಪಗಿರಿ ವನ್ಯಧಾಮಕ್ಕೆ ಸೇರಿಸಿರುವುದನ್ನು ವಿರೋಧಿಸಿ ಐದು ಗ್ರಾಮಗಳ ಗ್ರಾಮಸ್ಥರು ನಿರಂತರ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಕೊಲ್ಲಮೊಗರಿನಲ್ಲಿ ನಡೆದ ಅರಣ್ಯ ಅಧಿಕಾರಿಗಳ ಹಾಗೂ ಗ್ರಾಮಸ್ಥರ ನಡುವೆ ನಡೆದ ಜನಸಂಪರ್ಕ ಸಭೆಯಲ್ಲಿ ಪುಷ್ಪಗಿರಿ ಸೂಕ್ಷ್ಮ ಪ್ರದೇಶದಿಂದ ಹೊರಗಿಡುವವರೆಗೂ ಈ ಗ್ರಾಮಗಳಿಗೆ ಅಧಿಕಾರಿಗಳನ್ನು ಬರಲು ಬಿಡುವುದಿಲ್ಲ ಎನ್ನುವ ಪ್ರತಿಜ್ಞೆಯನ್ನೂ ಮಾಡಿದ್ದರು. ಅದೇ ಪ್ರಕಾರ ಇಂದು ಬಾಳುಗೋಡು ಪರಿಸರಕ್ಕೆ ಬಂದಿದ್ದ ವನ್ಯಜೀವಿ ಅಧಿಕಾರಿಗಳ ವಾಹನವನ್ನು ಸುಮಾರು 100 ಕ್ಕೂ ಮಿಕ್ಕಿದ ಗ್ರಾಮಸ್ಥರು ತಡೆಹಿಡಿದಿದ್ದಾರೆ. ಒರ್ವ ರೇಂಜರ್, ಎರಡು ಫಾರೆಸ್ಟರ್, ಎರಡು ಗಾರ್ಡ್ ಹಾಗೂ ಒರ್ವ ಚಾಲಕರಿಗೆ ದಿಗ್ಭಂದನ ಹಾಕಿರುವ ಗ್ರಾಮಸ್ಥರು ಯಾವುದೇ ಕಾರಣಕ್ಕೂ ಅಧಿಕಾರಿಗಳನ್ನು ಹೋಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ಡಿಎಫ್ಓ ಆಗಮಿಸಿ ತಮ್ಮ ಸಮಸ್ಯೆ ಇತ್ಯರ್ಥಗೊಳಿಸುವವರೆಗೂ ಅಧಿಕಾರಿಗಳು ಜಾಗ ಬಿಟ್ಟು ತೆರಳಬಾರದೆಂದು ಬಿಗಿಪಟ್ಟು ತಳೆದಿದ್ದಾರೆ.