DAKSHINA KANNADA
ರೈತರ ಜಮೀನಿಗೆ ನುಗ್ಗಿ ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯ – ಸರಕಾರದ ಮಧ್ಯಪ್ರವೇಶಕ್ಕೆ ಆಗ್ರಹ
ಪುತ್ತೂರು ಫೆಬ್ರವರಿ 02: ದಕ್ಷಿಣಕನ್ನಡ ಜಿಲ್ಲೆಯ ಹಲವು ಕಡೆ ಅರಣ್ಯ ಇಲಾಖೆಯ ಅಧಿಕಾರಿಗಳು ರೈತರ ಜಮೀನಿಗೆ ನುಗ್ಗಿ ದೌರ್ಜನ್ಯ ನಡೆಸುತ್ತಿದ್ದು, ಸರಕಾರ ತಕ್ಷಣವೇ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತಸಂಘದ ದಕ್ಷಿಣಕನ್ನಡ ಜಿಲ್ಲಾ ಸಂಚಾಲಕ ರೂಪೇಶ್ ಶೆಟ್ಟಿ ಒತ್ತಾಯಿಸಿದ್ದಾರೆ.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಹಲವಾರು ವರ್ಷಗಳಿಂದ ಕೃಷಿಯನ್ನು ನಡೆಸಿಕೊಂಡು ಬರುತ್ತಿರುವ ರೈತರ ಜಮೀನಿಗೆ ಅರಣ್ಯ ಇಲಾಖೆ ಅಧಿಕಾರಿಗಳು ನುಗ್ಗಿ ಕೃಷಿ ಮಾಡುತ್ತಿರುವ ಜಮೀನು ಅರಣ್ಯ ಇಲಾಖೆಗೆ ಸೇರಿದ್ದ ಎಂದು ಬೆದರಿಸುತ್ತಿದ್ದಾರೆ. ತಕ್ಷಣವೇ ಜಾಗ ಖಾಲಿ ಮಾಡಿ ಹೋಗಿ ಎನ್ನುವ ಆದೇಶವನ್ನೂ ಮಾಡುತ್ತಿದ್ದಾರೆ. ಹಲವಾರು ವರ್ಷಗಳ ಹಿಂದೆ ಸರಕಾರಿ ಜಮೀನು ಹಾಗು ಪಟ್ಟಾ ಭೂಮಿಯನ್ನು ಉಪಯೋಗಿಸಿಕೊಂಡು ಕೃಷಿ ನಡೆಸುತ್ತಿರುವ ರೈತರನ್ನು ಏಕಾಏಕಿ ಜಮೀನು ಬಿಟ್ಟು ತೆರಳಿ ಎನ್ನುವ ದೌರ್ಜನ್ಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣವೇ ನಿಲ್ಲಿಸಬೇಕು. ಸರಕಾರ ಮತ್ತು ಇಲಾಖೆಯ ನಡುವಿನ ಸಮಸ್ಯೆಗೆ ರೈತರನ್ನು ಹೊಣೆಯಾಗಿ ಮಾಡುವ ಕೆಲಸಕ್ಕೆ ಕೈ ಹಾಕಿದಲ್ಲಿ ರೈತಸಂಘ ಹೋರಾಟದ ಹಾದಿ ಹಿಡಿಯಲಿದೆ ಎಂದು ಅವರು ಸರಕಾರವನ್ನು ಎಚ್ಚರಿಸಿದರು.