DAKSHINA KANNADA
ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಮುಂದುವರೆದ ಅಮರಣಾಂತ ಉಪವಾಸ ಸತ್ಯಾಗ್ರಹ…!!
ಕಡಬ ಮಾರ್ಚ್ 15: ಅರಣ್ಯಾಧಿಕಾರಿಗಳು ದೌರ್ಜನ್ಯ ಖಂಡಿಸಿ..ದೌರ್ಜನ್ಯ ನಡೆಸಿದ್ದ ಅರಣ್ಯಾಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಲು ಒತ್ತಾಯಿಸಿ ಕುಟುಂಬವೊಂದು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಇದರಲ್ಲಿ ಭಾಗವಹಿಸಿದ್ದ, ವೃದ್ಧ ಮಹಿಳೆ ಸೀತಮ್ಮ ಎಂಬುವರು ಕುಸಿದು ಬಿದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ರಾತ್ರಿಯೂ ಕೂಡ ಉಪವಾಸ ಸತ್ಯಾಗ್ರಹ ಮುಂದುವರೆದಿದ್ದು, ಅಧಿಕಾರಿಗಳ ಸ್ಪಷ್ಟ ಭರವಸೆಗಾಗಿ ಉಪವಾಸ ನಿರತರು ಪಟ್ಟು ಹಿಡಿದಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಅಕ್ರಮ ಮರಗಳ್ಳತನದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನಲೆ ಐತ್ತೂರು ಗ್ರಾಮದ ಮೂಜೂರು ಪದ್ಮಯ್ಯ ಗೌಡ ಎಂಬುವರ ಮನೆಗೆ ರಾತ್ರೋ ರಾತ್ರಿ ಅರಣ್ಯ ಸಂಚಾರಿ ದಳದ ಅಧಿಕಾರಿ ಸಂಧ್ಯಾ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸುವ ನೆಪದಲ್ಲಿ ಮನೆ ಮಂದಿಯ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ದೌರ್ಜನ್ಯ ಎಸಗಿದ ಅಧಿಕಾರಿಗಳ ವಿರುದ್ದ ದೂರು ನೀಡಲಾಗಿದ್ದರೂ, ಇಲ್ಲಿ ತನಕ ಪ್ರಕರಣ ದಾಖಲಿಸಲಾಗಿಲ್ಲ. ಹಾಗಾಗಿ ಕೂಡಲೇ ಈ ಬಗ್ಗೆ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಕಡಬ ತಹಸೀಲ್ದಾರ್ ಕಚೇರಿಯ ಎದುರು ಭಾಗದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಪ್ರಾರಂಭಿಸಲಾಗಿದೆ.
ಇನ್ನು ಬೆಳಗ್ಗೆನಿಂದ ಆರಂಭವಾದ ಉಪವಾಸ ಸತ್ಯಾಗ್ರಹಕ್ಕೆ ಕಡಬ ತಹಶೀಲ್ದಾರ್ ಹೊರತುಪಡಿಸಿ ಯಾವುದೇ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಜಿಲ್ಲೆಯ ಸಂಸದರು, ಶಾಸಕರು ಹಾಗೂ ಸಚಿವರಾಗಲಿ ದೌರ್ಜನ್ಯ ನಡೆದು ಇಷ್ಟು ದಿನವಾದರೂ ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.