LATEST NEWS
ರಮ್ಜಾನ್ ಉಪವಾಸ ವಿದ್ದರೂ..ಅಸಹಾಯಕರ ಹೊಟ್ಟೆ ತಣಿಸಿದ ಮಹಾತಾಯಿ ಈ ಮಹಿಳೆ
ಉಡುಪಿ ಎಪ್ರಿಲ್ 25: ವೀಕೆಂಡ್ ಕರ್ಫ್ಯೂನಿಂದಾಗಿ ರಸ್ತೆ ಬದಿಗಳಲ್ಲಿ ಮಲಗುವ ಅಸಹಾಯಕರಿಗೆ ಊಟ ನೀಡುವ ಮೂಲಕ ಮುಸ್ಲೀಂ ಮಹಿಳೆಯೊಬ್ಬರು ಮಾನವೀಯತೆ ಮೆರೆದಿದ್ದಾರೆ.
ಕೊರೊನಾ ಎರಡನೇ ಅಲೆ ಹಿನ್ನಲೆ ರಾಜ್ಯ ಸರಕಾರ ವಿಕೇಂಡ್ ಲಾಕ್ ಡೌನ್ ಘೋಷಿಸಿದೆ. ಈ ಹಿನ್ನಲೆ ರಸ್ತೆ ಬದಿಗಳಲ್ಲಿ ಇರುವ ಕಾರ್ಮಿಕರು ಹಾಗೂ ಅಸಾಹಯಕರು ಊಟದ ವ್ಯವಸ್ಥೆ ಇಲ್ಲದೆ ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ರಾತ್ರಿ ಹೊತ್ತು ಊಟ ನೀಡುವ ಮೂಲಕ ಮುಸ್ಲೀಂ ಮಹಿಳೆಯೊಬ್ಬರು ಅನ್ನದಾತೆಯಾಗಿ ಕಾಣಿಸಿಕೊಂಡಿದ್ದಾರೆ.
ವೀಕೆಂಡ್ ಕರ್ಫ್ಯೂ ಎಂದು ಎಲ್ಲರೂ ಬೆಚ್ಚಗೆ ಮನೆಯಲ್ಲಿದ್ದರೆ ಮುಸ್ಲಿಮ್ ಮಹಿಳೆಯೊಬ್ಬರು ಮನೆಯಲ್ಲಿ ಊಟ ತಯಾರಿಸಿ ಉಡುಪಿ ನಗರ ಭಾಗದಲ್ಲಿ ಹಸಿವಿನಿಂದ ಇದ್ದವರಿಗೆ ನೀಡಿದ್ದಾರೆ. ಸದ್ದಿಲ್ಲದೆ ತನ್ನ ಪತಿಯೊಂದಿಗೆ ಬಂದು ಊಟ ನೀಡುವ ಇವರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಕೋವಿಡ್-19 ಪ್ರಕರಣ ಉಡುಪಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ವಿಕೇಂಡ್ ಕರ್ಫ್ಯೂವನ್ನು ಸರಕಾರ ವಿಧಿಸಿದೆ. ಆದರೆ ಕಾರ್ಮಿಕರಿಗೆ ಮಾತ್ರ ಸರಿಯಾದ ಊಟದ ವ್ಯವಸ್ಥೆ ಮಾಡಿಲ್ಲ. ಹೊಟೇಲ್, ಡಾಭ ಅವಲಂಬಿತ ಕಾರ್ಮಿಕರನ್ನು ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿ ಮಲಗಬೇಕಾದ ಪರಿಸ್ಥಿತಿ. ಇಂತಹ ಸ್ಥಿತಿಯಲ್ಲಿ ಬೆಳಿಗ್ಗೆ ಪೂರ್ತಿ ಉಪವಾಸವಿದ್ದು ದಣಿದಿದ್ದರೂ ಅದನ್ನು ಲೆಕ್ಕಿಸದೆ ಮಹಿಳೆ ನಿಸ್ವಾರ್ಥವಾಗಿ ಊಟ ತಯಾರಿಸಿ ತಂದು ಹಂಚಿರುವುದು ಮಾನವೀಯ ಕಳಕಳಿಗೆ ಸಾಕ್ಷಿಯಾಗಿದೆ.