LATEST NEWS
ಹೊಸ ವರ್ಷದ ಪ್ರಯುಕ್ತ ಧರ್ಮಸ್ಥಳದಲ್ಲಿ ವಿಶೇಷ ಹೂವಿನ ಅಲಂಕಾರ
ಹೊಸ ವರ್ಷದ ಪ್ರಯುಕ್ತ ಧರ್ಮಸ್ಥಳದಲ್ಲಿ ವಿಶೇಷ ಹೂವಿನ ಅಲಂಕಾರ
ಮಂಗಳೂರು ಜನವರಿ 3: ಹೊಸ ವರ್ಷದ ಪ್ರಯುಕ್ತ ಬೆಂಗಳೂರಿನ ಕುಟುಂಬವೊಂದು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ವಿಶೇಷ ಅಲಂಕಾರ ಮಾಡಿ ಗಮನ ಸೆಳೆದಿದ್ದಾರೆ. ಬೆಂಗಳೂರಿನ ಚಂದ್ರ ಲೇ ಔಟ್ ನಿವಾಸಿಗಳಾದ ಸಾಯಿ ಶರವಣ, ಎಸ್. ಗೋಪಾಲ್ ರಾವ್, ಮಂಜುನಾಥ ರಾವ್, ಆನಂದ್ ಜೊತೆಗೂಡಿ ಕಳೆದ 20 ವರ್ಷಗಳಿಂದ ಹೊಸ ವರ್ಷಕ್ಕೆ ಮಂಜುನಾಥನ ದರ್ಶನಕ್ಕಾಗಿ ಆಗಮಿಸುತ್ತಿದ್ದರು.
ಈ ನಡುವೆ ಕಳೆದ 12 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹೂವಿನ ಅಲಂಕಾರ ಮಾಡಿ ಹೊಸ ವರ್ಷವನ್ನು ದೇವರ ಸೇವೆಗಾಗಿ ಮೀಸಲಿಡುತ್ತಿದ್ದಾರೆ. ಹಣ್ಣುಗಳಾದ ದಾಳಿಂಬೆ, ಅನಾನಸು ಸೇರಿದಂತೆ ಭತ್ತದ ತೆನೆ, ಕಬ್ಬು, ತೆಂಗಿನ ಗರಿ, ಬಾಳೆ ದಿಂಡು, ತಾವರೆ, ಲಿಲಿಯಂ, ಜಮೈಕಾನ್ ಎಲೆ, ಆಂಥೋರಿಯಂ, ಕ್ರಿಸಾಂಟಮೊ ಹೀಗಿ ವಿವಿಧ ರೀತಿಯ ಹಸಿರು ತರಕಾರಿ, ಹೂವುಗಳನ್ನು ಬಳಸಿ ವಿಶಿಷ್ಟವಾಗಿ ಅಲಂಕಾರ ಮಾಡಲಾಗಿದೆ.
ಒಟ್ಟು ಆರು ಲೋಡ್ ಸಾಮಗ್ರಿಗಳನ್ನು ಬಳಸಲಾಗಿದ್ದು ದೇವಸ್ಥಾನದ ಹೊರಾಂಗಣದ ದ್ವಾರ, ಸುತ್ತು ಪೌಳಿ, ಛಾವಣಿ ಸ್ತಂಭಗಳನ್ನು ವಿಭಿನ್ನವಾಗಿ ಸಿಂಗರಿಸಲಾಗಿದೆ. ಹೊಸ ವರ್ಷಕ್ಕೆ ಧರ್ಮಸ್ಥಳಕ್ಕೆ ಆಗಮಿಸಿದ ಭಕ್ತರಿಗೆ ಮಂಜುನಾಥನ ಸನ್ನಿಧಿ ಈ ಬಾರಿ ಎಂದಿಗಿಂತ ವಿಶೇಷವಾಗಿ ಆಕರ್ಷಿಸಿತ್ತು. ಈ ವಿಶಿಷ್ಟ ಅಲಂಕಾರ ಐದು ದಿನಗಳ ಕಾಲ ದೇವಸ್ಥಾನದಲ್ಲಿ ಕಂಗೊಳಿಸಲಿದೆ.