LATEST NEWS
ಪಶ್ಚಿಮಘಟ್ಟದಲ್ಲಿ ಸುರಿಯುತ್ತಿರುವ ಮಳೆಗೆ ಘಟ್ಟದ ತಪ್ಪಲಿನಲ್ಲಿ ಪ್ರವಾಹ ಪರಿಸ್ಥಿತಿ
ಪಶ್ಚಿಮಘಟ್ಟದಲ್ಲಿ ಸುರಿಯುತ್ತಿರುವ ಮಳೆಗೆ ಘಟ್ಟದ ತಪ್ಪಲಿನಲ್ಲಿ ಪ್ರವಾಹ ಪರಿಸ್ಥಿತಿ
ಪುತ್ತೂರು ಅಗಸ್ಟ್ 9: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ದಕ್ಷಿಣಕನ್ನಡ ಜಿಲ್ಲೆಯ ಗುಂಡ್ಯಾ, ಶಿರಾಡಿ, ಸುಬ್ರಹ್ಮಣ್ಯ ಸೇರಿದಂತೆ ಘಟ್ಟದ ತಪ್ಪಲಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಗುಂಡ್ಯ ಸಮೀಪದ ಉದನೆ ಎಂಬಲ್ಲಿ ಹೊಳೆ ತುಂಬಿ ಹರಿದಿದ್ದು ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೇತುವೆ ಮೇಲಿನಿಂದ ಹರಿದಿದೆ. ಹೀಗಾಗಿ ಹೆದ್ದಾರಿ ಸಂಪರ್ಕ ಬಂದ್ ಮಾಡಲಾಗಿದ್ದು ಇಕ್ಕೆಲಗಳಲ್ಲಿ ವಾಹನಗಳು ಕಿಲೋ ಮೀಟರ್ ಗಟ್ಟಲೆ ಸಾಲುಗಟ್ಟಿ ನಿಂತಿವೆ.
ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ನೆರೆ ಪರಿಸ್ಥಿತಿ ಉಂಟಾಗಿದ್ದು ಶಿಶಿಲೇಶ್ವರ ದೇವಸ್ಥಾನ ಸಂಪೂರ್ಣ ನೆರೆಯಿಂದ ಮುಳುಗಡೆಯಾಗಿದೆ. ಅಲ್ಲಿನ ಹಲವೆಡೆ ಕೃಷಿಕರ ಜಮೀನು, ಮನೆಗಳಿಗೂ ನೆರೆ ನೀರು ನುಗ್ಗಿದೆ. ಇನ್ನು ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಹೊಸ್ಮಠ ಸೇತುವೆ ಕಳೆದ 24 ಗಂಟೆಯಿಂದ ಮುಳುಗಡೆಯಾಗಿದೆ.
ಗುಂಡ್ಯಾ ಸಮೀಪದ ಪರಿಶಿಷ್ಟ ಕಾಲನಿಯ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಜನ ಸಂಕಷ್ಟ ಪಡುವಂತಾಗಿದೆ. ಕುಮಾರಧಾರಾ ಮತ್ತು ನೇತ್ರಾವತಿ ನದಿಯೂ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆಯಲ್ಲಿರುವಂತೆ ಸೂಚಿಸಲಾಗಿದೆ.