LATEST NEWS
ಉಡುಪಿಯಲ್ಲಿ ನಿಲ್ಲದ ನೆರೆ ಹಾವಳಿ – ಸುರಕ್ಷಿತ ಪ್ರದೇಶಕ್ಕೆ ಜನರ ಸ್ಥಳಾಂತರ

ಉಡುಪಿಯಲ್ಲಿ ನಿಲ್ಲದ ನೆರೆ ಹಾವಳಿ – ಸುರಕ್ಷಿತ ಪ್ರದೇಶಕ್ಕೆ ಜನರ ಸ್ಥಳಾಂತರ
ಉಡುಪಿ ಅಗಸ್ಟ್ 15: ಉಡುಪಿ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಮಳೆ ಪ್ರಮಾಣ ಕಡಿಮೆಯಾದರೂ ಉಡುಪಿಯ ತಗ್ಗು ಪ್ರದೇಶಗಳಲ್ಲಿ ನಿಂತಿರುವ ನೆರೆ ತಗ್ಗಿಲ್ಲ. ಕುಂದಾಪುರ ತಾಲೂಕಿನ ಕಂಡ್ಲೂರು ಮತ್ತು ಬೈಂದೂರಲ್ಲಿ ತಗ್ಗು ಪ್ರದೇಶಗಳಲ್ಲೂ ಕೂಡ ನೆರೆ ಹಾವಳಿ ಇನ್ನೂ ಮುಂದುವರೆದಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಟಪಾಡಿ ಉಪ್ಪೂರಲ್ಲಿ ಕೂಡಾ ನೆರೆ ನೀರು ನಿಧಾನಕ್ಕೆ ತಗ್ಗುತ್ತಿದೆ. ಆದರೆ ತೋಟ ಹಾಗು ಗದ್ದೆಗಳಲ್ಲಿ ನೆರೆ ನೀರು ಕಡಿಮೆಯಾಗಿಲ್ಲ. ತಗ್ಗು ಪ್ರದೇಶದ ಒಳ ರಸ್ತೆಗಳ ಮೇಲೆಲ್ಲ ಮಳೆ ನೀರು ಹರಿಯುತ್ತಿದೆ. ಕೆಲವೆಡೆ ಬದಲಿ ರಸ್ತೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಕಾರ್ಕಳ, ಹೆಬ್ರಿಯಲ್ಲೂ ತುಂಬಿ ಹರಿಯುತ್ತಿದೆ.

ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ತಟ್ಟು, ಬೆಟ್ಲಿಕ್ಕಿ ವ್ಯಾಪ್ತಿಯಲ್ಲಿ ನೆರೆ ನೀರು ನಿಂತಿದ್ದು, ಹಲವಾರು ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ.
ಎತ್ತಣಕಟ್ಟೆ ಜಲಾಯನ ಪ್ರದೇಶದಲ್ಲಿ ಸತತ ಮಳೆ ಬೀಳುತ್ತಿದ್ದು, ಅಣೆಕಟ್ಟು ಸುರಕ್ಷತೆ ದೃಷ್ಠಿಯಿಂದ ಜಲಾಶಯದ ನೀರನ್ನು ಯಾವುದೇ ಸಂದರ್ಭದಲ್ಲಿ ಹೊರ ಬಿಡಲಾಗುವುದು ಎಂದು ಮಾಸ್ತಿಕಟ್ಟೆ ವಾರಾಹಿ ಜಲ ವಿದ್ಯುತ್ ಯೋಜನೆ ಅಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಅಭಿಯಂತರು ತಿಳಿಸಿದ್ದಾರೆ. ವಾರಾಹಿ ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ.
ಉಡುಪಿ ಜಿಲ್ಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ನೆರೆ ಪೀಡಿತ ಪ್ರದೇಶಗಳಿಂದ ಜನರ ಸ್ಥಳಾಂತರ ಕೆಲಸ ಮಾಡುತ್ತಿದ್ದು, ಇಂದು ಬೆಳಿಗ್ಗೆ ಕುಂದಾಪುರದ ನೆರೆ ಪೀಡಿತ ಪ್ರದೇಶದಿಂದ 12 ದಿನದ ಮಗುವೊಂದನ್ನು ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಮುಂದಿನ ನಾಲ್ಕು ದಿನಗಳ ಕಾಲ ಕರಾವಳಿಯಾದ್ಯಂತ ಮಳೆ ಭಾರೀ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಮೀನುಗಾರರಿಗೆ- ನೆರೆ ಪೀಡಿತ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ಸಂದೇಶ ರವಾನಿಸಿದೆ.