BELTHANGADI
ಬೆಳ್ತಂಗಡಿ – ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋದ ಯುವಕರು – ಬಂಡೆಯ ಎಡೆಯಲ್ಲಿ ಸಿಲುಕಿ ಬಚಾವ್

ಬೆಳ್ತಂಗಡಿ, ಜೂನ್ 16 : ಯುವಕರಿಬ್ಬರು ಬೈಕ್ ನ ಮೂಲಕ ತುಂಬಿ ಹರಿಯುತ್ತಿರುವ ಹೊಳೆ ದಾಟಲು ಪ್ರಯತ್ನಿಸಿದ ವೇಳೆ ಬೈಕ್ ಸಹಿತ ನೀರಿನಲ್ಲಿ ಕೊಚ್ಚಿ ಹೋಗಿದ್ದಲ್ಲದೆ, ಬಳಿಕ ಬಂಡೆಗಳ ಎಡೆಯಲ್ಲಿ ಸಿಲುಕಿ ಅಪಾಯದಿಂದ ಅಪಾಯದಿಂದ ಪಾರಾಗಿ ಬಂದ ಘಟನೆ ನಡೆದಿದೆ.
ಸವಣಾಲು ಗ್ರಾಮದ ಮಂಜದಬೆಟ್ಟುವಿನಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿತ್ತಿಲಪೇಲ ಪ್ರದೇಶವನ್ನು ಸಂಪರ್ಕಿಸುವ ಕೂಡುಜಾಲು ಎಂಬಲ್ಲಿ ಹರಿಯುವ ಹೊಳೆಯಲ್ಲಿ ಘಟನೆ ಸಂಭವಿಸಿದೆ. ಹಿತ್ತಿಲಪೇಲ ಪ್ರದೇಶದ ಕೆಳಗಿನ ಪೇಲ ಎಂಬಲ್ಲಿನ ನಿವಾಸಿ ಕರಿಯ ಮಲೆಕುಡಿಯ ಎಂಬವರ ಮಗ ಸತೀಶ್ ಮತ್ತು ಸಹ ಸವಾರ ಸುಳ್ಳೋಡಿ ನಿವಾಸಿ ಸಂಜೀವ ಪೂಜಾರಿ ಜೊತೆಯಾಗಿ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಈ ಹೊಳೆಯನ್ನು ಬೈಕ್ ಸಮೇತ ದಾಟಲು ಯತ್ನಿಸಿದ್ದಾರೆ. ಈ ವೇಳೆ, ಬೈಕ್ ಸಹಿತ ಹೊಳೆ ನೀರಿನಲ್ಲಿ ಕೊಚ್ಚಿ ಹೋಗಿರುತ್ತಾರೆ. ಅದೃಷ್ಟವಶಾತ್ ಬೈಕ್ ನದಿ ಬಂಡೆಗಳ ಎಡೆಯಲ್ಲಿ ಸಿಲುಕಿದ್ದು, ಯುವಕರಿಬ್ಬರು ಸಿನಿಮೀಯ ರೀತಿಯಲ್ಲಿ ಬದುಕುಳಿದಿದ್ದಾರೆ.

ಮೂರು ದಿನಗಳಿಂದ ಭಾರೀ ಮಳೆ ಆಗುತ್ತಿದ್ದು ಹೊಳೆಯಲ್ಲಿ ನೀರಿನ ಹರಿವು ಹೆಚ್ಚಿದ್ದರೂ ಯುವಕರು ದುಸ್ಸಾಹಸಕ್ಕಿಳಿದು ಪಾರಾಗಿ ಬಂದಿದ್ದಾರೆ.