LATEST NEWS
ಹಠಾತ್ ಪ್ರವಾಹಕ್ಕೆ ಕೊಚ್ಚಿ ಹೋದ 11 ನೇ ತರಗತಿ ವಿಧ್ಯಾರ್ಥಿ
ಚೆನ್ನೈ ಮೇ 17 : ಹಠಾತ್ ಪ್ರವಾಹಕ್ಕೆ 11 ನೇ ತರಗತಿಯ ವಿಧ್ಯಾರ್ಥಿಯೊಬ್ಬ ಕೊಚ್ಚಿ ಹೋದ ಘಟನೆ ತಮಿಳುನಾಡಿನ ತೆಂಕಾಶಿಯಲ್ಲಿರುವ ಓಲ್ಡ್ ಕುರ್ಟಾಲಂ ಜಲಪಾತದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಕೊಚ್ಚಿ ಹೋದ ಹುಡುಗನನ್ನು ಅಶ್ವಿನ್ ಎಂದು ಗುರುತಿಸಲಾಗಿದೆ. ಈತ ಪಳಯಂಕೊಟ್ಟೈನ NGO ಕಾಲೋನಿಯ 11 ನೇ ತರಗತಿ ವಿದ್ಯಾರ್ಥಿ. ವಿಷಯ ತಿಳಿದ ಕೂಡಲೇ ತಮಿಳುನಾಡು ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ತಂಡವು ಜಿಲ್ಲಾಧಿಕಾರಿ ಎ.ಕೆ.ಕಮಲ್ ಕಿಶೋರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಸುರೇಶ್ ಕುಮಾರ್ ಅವರೊಂದಿಗೆ ರಕ್ಷಣಾ ಕಾರ್ಯಾಚರಣೆಗೆ ದೌಡಾಯಿಸಿದ್ದಾರೆ. ಪ್ರವಾಸಿಗರ ಗುಂಪೊಂದು ಹಳೆಯ ಕುರ್ಟಾಲಂ ಜಲಪಾತದಲ್ಲಿ ಸ್ನಾನ ಮಾಡುತ್ತಿತ್ತು. ಈ ವೇಳೆ ಜಲಪಾತ ಹಠಾತ್ ಆಗಿ ತುಂಬಿ ಹರಿದಿದೆ. ಪರಿಣಾಮ ಅರಿವಿಲ್ಲದೆ ಸಿಕ್ಕಿಬಿದ್ದ ಪ್ರವಾಸಿಗರು ಸಹಾಯಕ್ಕಾಗಿ ಕಿರುಚಾಡಿದ್ದಾರೆ. ಜಲಪಾತದ ಬಳಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿಯು ಪ್ರವಾಸಿ ತಾಣದಲ್ಲಿದ್ದ ಅಂಗಡಿಯವರ ನೆರವಿನೊಂದಿಗೆ ರಕ್ಷಿಸಲು ಧಾವಿಸಿದರು.
ರಕ್ಷಣಾ ಕಾರ್ಯಾಚರಣೆ ವೇಳೆ, ತಮಿಳುನಾಡು ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ತಂಡವು ಜಲಪಾತದಿಂದ ಸುಮಾರು 500 ಮೀಟರ್ ದೂರದಲ್ಲಿ ಕಲ್ಲುಗಳ ನಡುವೆ ಸಿಲುಕಿರುವ ಅಶ್ವಿನ್ ದೇಹವನ್ನು ಪತ್ತೆ ಮಾಡಿದೆ. ಸದ್ಯ ಸ್ಥಳೀಯ ಆಡಳಿತವು ಜಲಪಾತಕ್ಕೆ ಸಾರ್ವಜನಿಕರು ಪ್ರವೇಶಿಸುವುದನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.