BELTHANGADI
ಮೃತ್ಯುಂಜಯ, ನೇತ್ರಾವತಿ ನದಿಯಲ್ಲಿ ದಿಢೀರ್ ಪ್ರವಾಹ….!
ಬೆಳ್ತಂಗಡಿ ಅಕ್ಟೋಬರ್ 09: ಬೆಳ್ತಂಗಡಿ ಚಾರ್ಮಾಡಿ ಕಡೆಯಿಂದ ಹರಿಯುವ ಮೃತ್ಯುಂಜಯ ಹಾಗೂ ದಿಡುಪ ಕಡೆಯಿಂದ ಹರಿಯುವ ನೇತ್ರಾವತಿ ನದಿಗಳು ಮಂಗಳವಾರ ಸಂಜೆ ದಿಢೀರ್ ಉಕ್ಕಿ ಹರಿದ ಘಟನೆ ನಡೆಯಿತು.
ಚಾರ್ಮಾಡಿ, ದಿಡುಪೆ ಭಾಗದಲ್ಲಿ ಭಾರಿ ಮಳೆ ಇಲ್ಲದಿದ್ದರೂ ಏಕಾಏಕಿ ನದಿಗಳಲ್ಲಿ ನೀರು ಉಕ್ಕಿ ಹರಿದಿವೆ. ಇದರಿಂದ ನದಿ ತೀರದ ಜನರಲ್ಲಿ ಆತಂಕ ಉಂಟಾಯಿತು. ರಾತ್ರಿ ವೇಳೆ ನೆರಿಯ ಸೇತುವೆ ಸಂಪೂರ್ಣ ಮುಳುಗಡೆಯಾಗಿ ಸಂಚಾರಕ್ಕೆ ಅಡಚಣೆಯಾಗಿದೆ. ಸಂಜೆ 7 ಗಂಟೆ ಬಳಿಕ ಏರ ತೊಡಗಿದ ನೀರು, ರಾತ್ರಿ 9 ವರೆಗೂ ಏರಿಕೆ ಕಂಡಿದ್ದು ಬಳಿಕ ಇಳಿಕೆಯಾಗುತ್ತಿದ್ದು ಸ್ಥಳೀಯರ ಆತಂಕ ದೂರವಾಯಿತು. ಸ್ಥಳೀಯರು ಹೇಳುವ ಪ್ರಕಾರ 2019ರ ನೆರೆಯ ಬಳಿಕ ಈ ಭಾಗದಲ್ಲಿ ಮಂಗಳವಾರ ರಾತ್ರಿ ಅತಿ ಹೆಚ್ಚಿನ ನೀರು ನದಿಗಳಲ್ಲಿ ಹರಿದಿದೆ.
ಕರಾವಳಿ ಭಾಗದಲ್ಲಿ ಮಳೆ ಬಿಡುವು ನೀಡಿದೆ. ಮಂಗಳವಾರ ಜಿಲ್ಲೆಯ ಕೆಲವು ಕಡೆ ಸಾಧಾರಣ ಮಳೆಯಾಗಿದೆ. ಉಳಿದಂತೆ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಇಂದು ಮತ್ತೆ ನಾಳೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ವೇಳೆ ಉತ್ತಮ ಮಳೆ ಸುರಿಯುವ ನಿರೀಕ್ಷೆ ಇದೆ.