KARNATAKA
ಗಾಳಿ ರಭಸಕ್ಕೆ ಪಾತಿ ದೋಣಿ ಮುಗುಚಿ ಸಮುದ್ರ ಪಾಲಾಗಲಿದ್ದ ಮೀನುಗಾರನ ರಕ್ಷಣೆ

ಭಟ್ಕಳ ಡಿಸೆಂಬರ್ 21: ಭಟ್ಕಳ ಮೀನುಗಾರಿಕೆಗೆ ತೆರಳಿದ್ದ ಪಾತಿ ದೋಣಿ ಮುಗುಚಿ ಬಿದ್ದ ಹಿನ್ನಲೆ ಪ್ರಾಣಾಪಾಯಕ್ಕೆ ಸಿಲುಕಿದ್ದ ಮೀನುಗಾರನೊಬ್ಬನನ್ನು ಕರಾವಳಿ ಕಾವಲು ಪೊಲೀಸರು ರಕ್ಷಿಸಿದ್ದಾರೆ.
ಭಟ್ಕಳ ಕರಾವಳಿ ಕಾವಲು ಪೊಲೀಸ್ ಠಾಣಾ ವ್ಯಾಪ್ತಿಯ ಆಳ್ವೆಕೋಡಿ ಕಾಕಿಗುಡ್ಡ ದ್ವೀಪದ ಹತ್ತಿರ ಸಣಭಾವಿ ಗ್ರಾಮದ ಯಾದವ ಅವರ ಪಾತಿ ದೋಣಿ ಬೆಳಿಗ್ಗೆ 6 ಗಂಟೆ ಸಂದರ್ಭ ಭಾರೀ ಗಾಳಿಗೆ ಸಿಲುಕಿ ಪಲ್ಟಿಯಾಗಿದೆ.

ಇದೇ ಸಂದರ್ಭ ಅಲ್ಲೆ ಗಸ್ತು ತಿರುಗುತ್ತಿದ್ದ ಕರಾವಳಿ ಕಾವಲು ಪಡೆಯ ಇಂಟರ್ ಸೆಪ್ಟರ್ ನಲ್ಲಿ ಸಿಬ್ಬಂದಿಗಳು ಸಮುದ್ರದಲ್ಲಿ ಪ್ರಾಣ ಉಳಿಸಿಕೊಳ್ಳಲು ಈಜುತ್ತಾ ಇದ್ದ ಮೀನುಗಾರ ಯಾದವ ಅವರನ್ನು ರಕ್ಷಿಸಿದ್ದಾರೆ. ಕೂಡಲೇ ಮೀನುಗಾರನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಳ್ವೆಕೋಡಿ ಜೆಟ್ಟಿಗೆ ಕರೆದುಕೊಂಡು ಬಂದಿದ್ದಾರೆ. ಅಲ್ಲದೆ ಮೀನುಗಾರನ ಪಾತಿ ದೋಣಿ ಹಾಗೂ ಬಲೆಯನ್ನು ಕೂಡ ಈ ಸಂದರ್ಭ ರಕ್ಷಣೆ ಮಾಡಲಾಗಿದ್ದು, ಮೀನುಗಾರನಿಗೆ ಆಗುತ್ತಿದ್ದ ಭಾರೀ ನಷ್ಟವನ್ನು ತಪ್ಪಿಸಿದ್ದಾರೆ. ಕ್ಲಪ್ತ ಸಮಯದಲ್ಲಿ ಮೀನುಗಾರ ರಕ್ಷಣೆ ಮಾಡಿದ ಸಿಎಸ್ ಪಿ ಭಟ್ಕಳ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಅಭಿನಂಧನೆಯನ್ನು ಪೊಲೀಸ್ ಅಧೀಕ್ಷಕರು ಸಲ್ಲಿಸಿದ್ದಾರೆ.