LATEST NEWS
ಮೀನು ಮಾರಾಟ ಕುಸಿತದ ಹಿನ್ನಲೆ ಸಾಮಾಜಿಕ ಜಾಲತಾಣಗಳ ಮೊರೆ ಹೋದ ಮೀನುಗಾರ ಮಹಿಳೆಯರು
ಮೀನು ಮಾರಾಟ ಕುಸಿತದ ಹಿನ್ನಲೆ ಸಾಮಾಜಿಕ ಜಾಲತಾಣಗಳ ಮೊರೆ ಹೋದ ಮೀನುಗಾರ ಮಹಿಳೆಯರು
ಮಂಗಳೂರು ಅಗಸ್ಟ್ 3: ಕರಾವಳಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮೀನುಗಳಿಗೆ ರಾಸಾಯನಿಕ ಲೇಪನವಾಗುತ್ತಿರುತ್ತದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಕರಾವಳಿಯ ಮೀನು ವ್ಯಾ಼ಪಾರವನ್ನೇ ಬುಡಮೇಲು ಮಾಡಿದೆ.
ಮಳೆಗಾಲದ ಮೀನುಗಾರಿಕಾ ರಜೆ ಹಿನ್ನಲೆಯಲ್ಲಿ ಮೀನುಗಾರಿಕಾ ದೋಣಿಗಳು ಕಡಲಿಗೆ ಇಳಿಯದೇ ತಾಜಾ ಮೀನುಗಳ ಮಾರುಕಟ್ಟೆ ಬರುವುಜು ಅಪರೂಪವಾಗಿದ್ದವು. ಮಳೆಗಾಲದಲ್ಲಿ ಮೀನಿನ ಅಭಾವದಿಂದ ದೂರದ ತಮಿಳುನಾಡು, ಕೇರಳ ಹಾಗೂ ಮಹರಾಷ್ಟ್ರದಿಂದ ಸಂಸ್ಕೃರಿಸಿ ಇಡಲಾಗಿದ್ದ ಮೀನುಗಳು ಕರಾವಳಿಯ ಮಾರುಕಟ್ಟೆಗಳಿಗೆ ಸರಬರಾಜು ಆಗುತ್ತಿದ್ದವು.
ಈ ಮೀನುಗಳಿಗೆ ಶವಗಾರದಲ್ಲಿ ಮೃತ ದೇಹ ಕೆಡದಂತೆ ಇಡಲು ಲೇಪಿಸಲಾಗುವ ಪಾರ್ಮಾಲಿನ್ ಎಂಬ ರಾಸಾಯನಿಕ ವನ್ನು ಮೀನುಗಳು ಕೆಡದಂತೆ ಲೇಪಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎನ್ನುವ ಪುಕಾರು ದಟ್ಟವಾಗಿ ಹರಡಿತ್ತು. ಇಂತಹ ಘಟನೆಗಳು ನಡೆದಿಲ್ಲ ಎಂದು ಮೀನುಗಾರಿಕಾ ಇಲಾಖೆ ಹಾಗೂ ಆಹಾರ ಇಲಾಖೆ ಸ್ಪಷ್ಟನೆ ನೀಡಿದ್ದರೂ ಮೀನು ವ್ಯಾಪಾರ ಮಾತ್ರ ಬುಡಮೇಲಾಗಿತ್ತು.
ಈಗ ಮೀನುಗಾರಿಕಾ ಋತು ಆರಂಭವಾಗಿದೆ. ಮತ್ತೆ ಕಡಲ ಮಕ್ಕಳು ಮೀನಿನ ಬೇಟೆ ಆರಂಭಿಸಿದ್ದಾರೆ. ಕರಾವಳಿಯ ಮಾರುಕಟ್ಟೆಗೆ ವಿಧ ವಿಧದ ತಾಜಾ ಮೀನುಗಳು ಬರುತ್ತಿವೆ. ಆದರೆ ಜನರು ಮಾತ್ರ ಮೀನುಗಾರರನ್ನು ಸಂಶಯದಿಂದಲೇ ನೋಡುತ್ತಿದ್ದಾರೆ.
ರಾಸಾಯನಿಕ ಲೇಪನದ ಆತಂಕದಿಂದ ಹೊರ ಬರದ ಜನರು ಮೀನು ಮಾರುಕಟ್ಟೆಯತ್ತ ತಲೆ ಹಾಕುತ್ತಿಲ್ಲ. ಈ ಹಿನ್ನಲೆಯಲ್ಲಿ ಮೀನು ವ್ಯಾಪಾರವನ್ನೇ ಜೀವನ ನಿರ್ವಹಣೆಗೆ ಆಧಾರವಾಗಿಸಿಕೊಂಡಿರುವ ಮೀನುಗಾರ ಮಹಿಳೆಯರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ತಮ್ಮ ನೋವನ್ನು , ತಾವು ಅನುಭವಿಸುತ್ತಿರುವ ಸಮಸ್ಯೆ , ನಷ್ಟವನ್ನು ವಿವರಿಸಲು ಮೀನುಗಾರ ಮಹಿಳೆಯರು ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ.
ಮೊದಲ ಬಾರಿಗೆ ಮೀನುಗಾರ ಮಹಿಳೆಯರು ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ದುಗುಡವನ್ನು ಜನರ ಮುಂದೆ ಇರಿಸಿದ್ದಾರೆ. ತಾವು ಯಾವುದೇ ರಾಸಾಯನಿಕವನ್ನು ಬಳಸದೇ ತಾಜಾ ಮೀನುಗಳನ್ನು ತಂದು ಮಾರಾಟ ಮಾಡುತ್ತಿದ್ದರೂ ಜನರು ಮಾತ್ರ ಮೀನು ಖರೀದಿಗೆ ಬರದಿರುವುದರ ಕುರಿತು ವಿಷಾಧ ವ್ಯಕ್ತಪಡಿಸಿದ್ದಾರೆ.
ಕರಾವಳಿಯ ಮೀನುಗಾರರು ಕಡಲಿಗಿಳಿದು ತಾಜಾ ಮೀನುಗಳನ್ನು ತರುತಿದ್ದಾರೆ. ಅವುಗಳನ್ನು ಖರೀದಿಸುವಂತೆ ವಿನಂತಿಸಿದ್ದಾರೆ. ತಮ್ಮ ಮನೆಯ ಆರ್ಥಿಕ ಪರಿಸ್ಥಿತಿಯನ್ನು ವಿಡಿಯೋ ಮುಖಾಂತರ ತರೆದಿರಿಸಿದ್ದಾರೆ.
VIDEO