LATEST NEWS
ಮೀನಿನ ಮಲೀನ ನೀರು ರಸ್ತೆಗೆ ಬಿಡುತ್ತಿದ್ದ ಲಾರಿ ಅಡ್ಡ ಹಾಕಿ ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು
ಮೀನಿನ ಮಲೀನ ನೀರು ರಸ್ತೆಗೆ ಬಿಡುತ್ತಿದ್ದ ಲಾರಿ ಅಡ್ಡ ಹಾಕಿ ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು
ಮಂಗಳೂರು ಡಿಸೆಂಬರ್ 18: ಮೀನಿನ ಮಲೀನ ನೀರನ್ನು ರಸ್ತೆಗೆ ಬಿಡುವ ಮೂಲಕ ದುರ್ವಾಸನೆ ಹಾಗೂ ಬೈಕ್ ಸವಾರರ ಚಾಲನೆಗೆ ತೊಂದರೆ ನೀಡುತ್ತಿದ್ದ ಮೀನಿನ ಲಾರಿಯನ್ನು ಸಾರ್ವಜನಿಕರು ಅಡ್ಡ ಹಾಕಿ ಲಾರಿ ಮತ್ತು ಚಾಲಕನನ್ನು ಪೋಲಿಸ್ ವಶಕ್ಕೆ ನೀಡಿದ ಘಟನೆ ಮಂಗಳೂರು ನಗರದ ಮಣ್ಣಗುಡ್ಡ ಜಂಕ್ಷನ್ ನಲ್ಲಿ ನಡೆದಿದೆ.
ಮಂಗಳೂರು ಮೀನುಗಾರಿಕಾ ಬಂದರಿನಿಂದ ಮೀನು ತುಂಬಿಸಿ ಉಡುಪಿ ಕಡೆಗೆ ಸಾಗುತ್ತಿದ್ದ ಲಾರಿಯಿಂದ ಮಲೀನ ನೀರು ರಸ್ತೆ ತುಂಬೆಲ್ಲಾ ಚೆಲ್ಲುತ್ತಾ ಸಾಗುತ್ತಿದ್ದು, ತೈಲ ಮಿಶ್ರಿತ ನೀರಿನಿಂದ ಇಬ್ಬರು ದ್ವಿಚಕ್ರ ಸವಾರರೂ ನಿಯಂತ್ರಣ ತಪ್ಪಿ ಅಫಘಾತಕ್ಕೀಡಾಗಿದ್ದರು.
ಇದರಿಂದ ಆಕ್ರೋಶಗೊಂಡ ಸ್ಥಳೀಯರು ಲಾರಿಯನ್ನು ಬೆನ್ನಟ್ಟಿ ಮಣ್ಣಗುಡ್ಡ ಜಂಕ್ಷನ್‌ನಲ್ಲಿ ಅಡ್ಡಹಾಕಿ ಲಾರಿ ಮತ್ತು ಚಾಲಕನ್ನು ತೀವ್ರ ತರಾಟೆಗೆ ತೆಗೆದುಕೊಂಡು ಬರ್ಕೆ ಪೊಲಿಸರಿಗೆ ಒಪ್ಪಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಗರ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೀನು ಸಾಗಾಟದ ವಾಹನಗಳ ಬೇಕಾಬಿಟ್ಟಿ ಚಾಲನೆಯಿಂದಾಗಿ ರಸ್ತೆಗಳಲ್ಲಿ ಮೀನಿನ ದುರ್ನಾತ ಬೀರಲಾರಂಭಿಸಿವೆ.
ಈ ಕುರಿತಂತೆ ಇತ್ತೀಚೆಗೆ ಪೊಲೀಸ್ ಕಮಿಷನರ್ ಜೊತೆ ಪೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ದೂರನ್ನು ನೀಡಿದ್ದರು. ಆದರೂ ಮೀನು ತುಂಬಿದ ಲಾರಿಗಳು ರಾತ್ರಿ ಹಗಲೆನ್ನದೆ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಮಂಗಳೂರು ನಗರದ ಎಲ್ಲಾ ರಸ್ತೆಗಳಲ್ಲೂ ಮೀನಿನ ನೀರನ್ನು ಚೆಲ್ಲುತ್ತಾ ಸಾಗುತ್ತಿದ್ದು, ಪೊಲೀಸ್ ಇಲಾಖೆಗೆ ಈ ಲಾರಿಗಳ ಮೇಲೆ ನಿಯಂತ್ರಣವೇ ಇಲ್ಲದಂತಾಗಿದೆ.
ರಸ್ತೆಯಲ್ಲಿ ಲಾರಿಗಳು ಚೆಲ್ಲಿಕೊಂಡು ಬರುವ ಮೀನಿನ ನೀರು ರಸ್ತೆಯಲ್ಲಿ ಸಾಗಿ ಬರುವ ಬೈಕ್ ಸವಾರರಿಗೆ ಮಾರಕವಾಗಿ ಪರಿಣಮಿಸುತ್ತಿವೆ. ರಸ್ತೆಯಲ್ಲಿ ಚೆಲ್ಲಿದ ಮೀನಿನ ನೀರು ಬೈಕ್ ಗಳು ಸ್ಕಿಡ್ ಆಗಲು ಕಾರಣವಾಗುತ್ತಿವೆ. ಹಲವಾರು ರಸ್ತೆ ಅಪಘಾತಗಳಿಗೆ ಈ ಮೀನಿನ ನೀರು ಕಾರಣವಾಗುತ್ತಿದೆ. ಈ ಬಗ್ಗೆ ಪೋಲೀಸ್ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.