LATEST NEWS
ಗೋದಾಮಿನಲ್ಲಿಟ್ಟ 21 ಲಕ್ಷ ಮೌಲ್ಯದ ಫಿಶ್ ಮೀಲ್ ಕಳವು…!!

ಮಂಗಳೂರು ಡಿಸೆಂಬರ್ 13: ಗೋದಾಮಿನಲ್ಲಿ ಶೇಖರಿಸಿಟ್ಟಿದ್ದ 50 ಕೆಜಿ ತೂಕದ 400 ಚೀಲಗಳ ಫಿಶ್ ಮೀಲ್ ಕಳವಾಗಿದೆ ಎಂದು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋದಾಮಿನ ಮೇಲ್ವಿಚಾರಕ ಇರ್ಫಾನ್ ಈ ಫಿಶ್ ಮೀಲ್ ಚೀಲಗಳನ್ನು ಕದ್ದೊಯ್ದಿದ್ದಾನೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಉಳ್ಳಾಲದ ಕೋಟೆಪುರದ ಮಹಮ್ಮದ್ ಸಮೀರ್ ಮಾಲೀಕತ್ವದ ‘ಯುನೈಟೆಡ್ ಮೆರೈನ್ ಪ್ರಾಡಕ್ಟ್ಸ್’ ಕಾರ್ಖಾನೆಯಲ್ಲಿ ಫಿಶ್ ಮೀಲ್ ಅನ್ನು ತಯಾರಿಸಿ, 50 ಕೆ.ಜಿ. ತೂಕದ ಚೀಲಗಳಲ್ಲಿ ತುಂಬಿಸಲಾಗುತ್ತದೆ. ಅವುಗಳನ್ನು ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಗೋದಾಮಿನಲ್ಲಿ ದಾಸ್ತಾನು ಮಾಡಲಾಗುತ್ತಿತ್ತು. ಗೋದಾಮಿನ ಹೊಣೆಯನ್ನು ಕಾರ್ಖಾನೆಯ ವ್ಯವಸ್ಥಾಪಕ ಇಸಾಕ್ ಹಾಗೂ ಮೇಲ್ವಿಚಾರಕ ಇರ್ಫಾನ್ ನೊಡಿಕೊಳ್ಳುತ್ತಿದ್ದರು. ಮಾಲೀಕರು ವಾರದಲ್ಲಿ 2-3 ದಿನ ಗೋದಾಮಿಗೆ ಭೇಟಿ ನೀಡುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘ಡಿ.9ರಂದು ವ್ಯವಸ್ಥಾಪಕ ಇಸಾಕ್ ಅವರನ್ನು ಮಾಲೀಕರು ಗೋವಾದ ಇನ್ನೊಂದು ಕಾರ್ಖಾನೆಗೆ ಕೆಲಸದ ಮೇಲೆ ಕಳುಹಿಸಿಕೊಟ್ಟಿದ್ದರು. ಗೋದಾಮಿನ ನಿರ್ವಹಣೆಗೆ ಯಾರೂ ಇಲ್ಲದ ವಿಷಯವನ್ನು ತಿಳಿದ ಇರ್ಫಾನ್ ಶನಿವಾರ (ಡಿ.10) ಮಧ್ಯಾಹ್ನ 12 ಗಂಟೆಗೆ ಫಿಶ್ ಮೀಲ್ ತುಂಬಿರುವ 400 ಚೀಲಗಳನ್ನು ಲಾರಿಯೊಂದರಲ್ಲಿ ತುಂಬಿಕೊಂಡು ಹೋಗಿದ್ದರು. ಅಂದು ರಾತ್ರಿ 9 ಗಂಟೆಯ ಸುಮಾರಿಗೆ ಇಸಾಕ್‌ಗೆ ಮಾಹಿತಿ ಗೊತ್ತಾಗಿತ್ತು. ಅವರು ಗೋದಾಮಿಗೆ ಬಂದು ಪರಿಶೀಲಿಸಿದಾಗ ಅಲ್ಲಿ ಶೇಖರಿಸಿಟ್ಟಿದ್ದ ಫಿಶ್ ಮೀಲ್‌ನ ಚೀಲಗಳು ಕಾಣೆಯಾಗಿದ್ದವು. ಈ ಬಗ್ಗೆ ಕೆಲಸಗಾರರಲ್ಲಿ ಅವರು ವಿಚಾರಿಸಿದ್ದರು. ಲಾರಿಯಲ್ಲಿ ಇರ್ಫಾನ್ ಸರಕನ್ನು ತುಂಬಿಕೊಂಡು ಹೋಗಿದ್ದನ್ನು ಖಚಿತಪಡಿಸಿದ್ದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.
