Connect with us

LATEST NEWS

ಬ್ರಿಟಿಷ್‌ ಪ್ರಧಾನಿ ಸ್ಥಾನಕ್ಕೆ ಮೊದಲ ಸುತ್ತಿನ ಆಯ್ಕೆ: ರಿಷಿ ಸುನಕ್‌ ಮುಂಚೂಣಿ

ಲಂಡನ್‌, ಜುಲೈ 14: ಬ್ರಿಟನ್‌ ಪ್ರಧಾನಿ ಸ್ಥಾನದ ಆಕಾಂಕ್ಷಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಬುಧವಾರ ಕನ್‌ಸರ್ವೇಟಿವ್ ಪಕ್ಷದ ಸಂಸದರಿಂದ ಮೊದಲ ಸುತ್ತಿನ ಮತದಾನ ನಡೆದಿದ್ದು, ಭಾರತೀಯ ಮೂಲದ ರಿಷಿ ಸುನಕ್‌ ಅವರು 88 ಮತಗಳೊಂದಿಗೆ ಮುಂಚೂಣಿಯಲ್ಲಿದ್ದಾರೆ.

ಮೊದಲ ಸುತ್ತಿನಲ್ಲಿ ಗರಿಷ್ಠ ಎಂಟು ಮಂದಿ ಕಣದಲ್ಲಿದ್ದರು. ಭಾರತೀಯ ಮೂಲದ ಇನ್ನೊಬ್ಬ ಆಕಾಂಕ್ಷಿಯಾಗಿದ್ದ ಅಟಾರ್ನಿ ಜನರಲ್‌ ಸುವೇಲಾ ಬ್ರವೆರ್‌ಮನ್‌ ಕೇವಲ 32 ಮತಗಳನ್ನು ಗಳಿಸುವುದರೊಂದಿಗೆ ಸ್ಪರ್ಧೆಯಿಂದ ಬಹುತೇಕ ಹೊರಬಿದ್ದಿದ್ದಾರೆ.

ವಾಣಿಜ್ಯ ಸಚಿವರಾದ ಪೆನ್ನಿ ಮರ್ಡೌಂಟ್‌ ಅವರು 67 ಮತಗಳನ್ನು ಗಳಿಸುವ ಮೂಲಕ ಪ್ರಧಾನಿ ಸ್ಪರ್ಧೆಯ ಆಕಾಂಕ್ಷಿಗಳ ಪೈಕಿ ಎರಡನೇ ಸ್ಥಾನದಲ್ಲಿದ್ದರೆ, ವಿದೇಶಾಂಗ ಕಾರ್ಯದರ್ಶಿ ಲಿಜ್‌ ಟ್ರಸ್‌ 50, ಮಾಜಿ ಸಚಿವರಾದ ಕೆಮಿ ಬಡೆನಾಚ್‌ 40 ಹಾಗೂ ಟಾಮ್‌ ಟುಗೆಂಧತ್‌ 37 ಸಂಸದರ ಬೆಂಬಲ ಗಳಿಸಿದ್ದಾರೆ.

ಪ್ರಧಾನಿ ಕುರ್ಚಿಯ ಮೇಲೆ ಕಣ್ಣಿಟ್ಟವರಲ್ಲಿ ಪ್ರಮುಖರಾಗಿದ್ದ ನೂತನ ಛಾನ್ಸಿಲರ್‌ ನದೀಂ ಜಹಾವಿ ಅವರು ಕೇವಲ 25 ಮತಗಳನ್ನು ಹಾಗೂ ಮಾಜಿ ಸಚಿವರಾದ ಜೆರೆಮಿ ಹಂಟ್‌ ಅವರು 18 ಮತಗಳನ್ನು ಗಳಿಸಿದ್ದಾರೆ. ಸ್ಪರ್ಧೆಯಲ್ಲಿ ಇರಲು ಕನಿಷ್ಠ 30 ಮತಗಳು ಅಗತ್ಯವಾಗಿರುವುದರಿಂದ ಇವರಿಬ್ಬರೂ ಇದೀಗ ಆಕಾಂಕ್ಷಿಗಳ ಪಟ್ಟಿಯಿಂದ ಹೊರಬೀಳುವಂತಾಗಿದೆ.

ಇನ್ಫೊಸಿಸ್‌ ಸಂಸ್ಥಾಪಕರಲ್ಲಿ ಒಬ್ಬರಾದ ಎನ್‌.ಆರ್.ನಾರಾಯಣ ಮೂರ್ತಿ ಅವರ ಅಳಿಯ ಹಾಗೂ ಬ್ರಿಟನ್‌ನಲ್ಲಿ ಅತ್ಯಂತ ಪ್ರಭಾವಿ ಅನಿವಾಸಿ ಭಾರತೀಯ ರಾಜಕಾರಣಿಯಾಗಿರುವ ರಿಷಿ ಸುನಕ್‌ ಅವರು ಕಳೆದ ವಾರವೇ ಪಕ್ಷದ ಸಂಸದರಿಗೆ ತಮ್ಮ ಆದ್ಯತೆಯನ್ನು ತಿಳಿಸಿದ್ದರು. ಆರ್ಥಿಕ ಪುನಶ್ಚೇತನ ಹಾಗೂ ಹಣದುಬ್ಬರ ನಿಯಂತ್ರಿಸುವುದಕ್ಕೆ ಅವರು ಆದ್ಯತೆ ನೀಡುವ ವಾಗ್ದಾನ ನೀಡಿದ್ದರು. ಇದರಿಂದ ಪ್ರಭಾವಿತರಾಗಿರುವ ಸಂಸದರು ಅವರ ನಾಯಕತ್ವಕ್ಕೆ ಮೊದಲ ಸುತ್ತಿನಲ್ಲಿ ಬೆಂಬಲವಾಗಿ ನಿಂತಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *