LATEST NEWS
ಹೈದರಾಬಾದ್ ಚಾರ್ಮಿನಾರ್ ಬಳಿ ಭೀಕರ ಬೆಂಕಿ ಅವಘಡ – ಸಾವಿನ ಸಂಖ್ಯೆ 17ಕ್ಕೆ ಏರಿಕೆ

ಹೈದರಾಬಾದ್ ಮೇ 18: ಹೈದರಬಾದ್ ನ ಐತಿಹಾಸಿಕ ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್‌ನಲ್ಲಿರುವ ಆಭರಣ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಸುಮಾರು 17ಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ ಎಂದು ಹೇಳಲಾಗಿದೆ.
ಅಗ್ನಿಶಾಮಕ ಅಧಿಕಾರಿಗಳ ಪ್ರಕಾರ, ಬೆಳಗ್ಗೆ 6 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಗೆ ತುರ್ತು ಕರೆ ಬಂದು ನಂತರ 12 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿವೆ ಎಂದು ತಿಳಿಸಿದ್ದಾರೆ. ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನಗಳು ಹಲವಾರು ಗಂಟೆಗಳ ಕಾಲ ಮುಂದುವರೆದಿದೆ.

ಗಾಯಗೊಂಡವರಲ್ಲಿ ಹಲವಾರು ಮಕ್ಕಳು ಸೇರಿದ್ದಾರೆ. ಎಲ್ಲರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಬೆಂಕಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸಿ ಮೃತರ ಪ್ರತಿ ಕುಟುಂಬಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದರು. ಪ್ರಾಥಮಿಕ ತನಿಖೆಯಲ್ಲಿ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವಾಗಿರಬಹುದು ಎಂದು ತಿಳಿದುಬಂದಿದೆ. ಘಟನೆಯ ನಿಖರವಾದ ಕಾರಣವನ್ನು ಕಂಡುಹಿಡಿಯಲು ವಿವರವಾದ ತನಿಖೆ ನಡೆಯುತ್ತಿದೆ.