LATEST NEWS
ಕಿನ್ನಿಮುಲ್ಕಿ – ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಗುಡ್ಡೆಗೆ ಬಿದ್ದ ಬೆಂಕಿ

ಉಡುಪಿ ಎಪ್ರಿಲ್ 4: ಉಡುಪಿಯ ಕಿನ್ನಿಮುಲ್ಕಿ ಪರಿಸರದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಗುಡ್ಡೆ ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಿನ್ನೆ ಮಧ್ಯಾಹ್ನದ ವೇಳೆ ವಿಪರೀತ ಬಿಸಿಲು ಮತ್ತು ಗಾಳಿ ಇದ್ದ ಕಾರಣ ಬೆಂಕಿ ಹಬ್ಬುವ ತೀವ್ರತೆ ಮತ್ತಷ್ಟು ಹೆಚ್ಚಿದಲ್ಲದೆ, ಒಣಗಿದ್ದ ಹುಲ್ಲಿಗೆ ಬೆಂಕಿ ಹಬ್ಬಿದ ಪರಿಣಾಮ ಆಸುಪಾಸಿನ ಮನೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಕೆಲವೇ ನಿಮಿಷಗಳಲ್ಲಿ ಹತ್ತಾರು ಎಕರೆ ಭೂಪ್ರದೇಶಕ್ಕೆ ಬೆಂಕಿ ವ್ಯಾಪಿಸಿದೆ. ಸಮೀಪದಲ್ಲಿರುವ ಅಗ್ನಿಶಾಮಕ ದಳದ ವಾಹನವನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಯಿತು. ಎರಡು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.