LATEST NEWS
ಪ್ರತಿಭಟನೆ ವೇಳೆ ಪ್ರಚೋದನಕಾರಿ ಭಾಷಣ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮೇಲೆ ಎಫ್ಐಆರ್

ಮಲ್ಪೆ, ಮಾರ್ಚ್ 22: ಮೀನುಗಾರರ ಬಂಧನ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಪ್ರಚೋದಕಾರಿಯಾಗಿ ಭಾಷಣ ಮಾಡಿದ್ದಾರೆ ಎಂಬ ಆರೋಪದ ಮೇಲೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ದ ಮಲ್ಪೆ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪಕ್ಕೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ ಆರೋಪದಲ್ಲಿ ಮೀನುಗಾರರನ್ನು ಪೊಲೀಸರು ಮಲ್ಪೆ ಮೀನುಗಾರರ ಸಂಘ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಮ್ಮ ಮನೆಗೆ ಕಳ್ಳರು ಬಂದರೆ ನಾವು ಏನು ಮಾಡುತ್ತೇವೆ ? ಪೊಲೀಸರು ಬರುವುದಕ್ಕೆ 5-6 ಗಂಟೆ ತಡವಾದರೆ ನಾವು ಏನು ಮಾಡುತ್ತೇವೆ ? ಕಳ್ಳರನ್ನು ಕಟ್ಟಿ ಹಾಕಲೇ ಬೇಕು, ಮತ್ತೇನು ಮಾಡಲಿಕ್ಕೆ ಆಗುತ್ತೆ ? ಏನು ಅವರಿಗೆ ಮಚ್ಚು, ಖಡ್ಗ, ತಲವಾರಿನಲ್ಲಿ ಹೊಡೆದಿದ್ದೇವಾ? ಕೇವಲ ಎರಡು ಕೆನ್ನೆಗೆ ಬಾರಿಸಿದ್ದು. ಅದು ಕೂಡ ಕಳ್ಳಿ ಅಂತ ಆರೋಪಿತ ಒಂದು ವ್ಯಕ್ತಿಗೆ. ಆ ಮಹಿಳೆಯದ್ದು ಏನಾದರೂ ಆಕ್ಷೇಪ ಉಂಟಾ ? ಎಂದು ಮಹಿಳೆಗೆ ಸಾರ್ವಜನಿಕವಾಗಿ ಕಟ್ಟಿ ಹಾಕಿ ಹೊಡೆದಿರುವುದನ್ನು ಸಮರ್ಥನೆ ಮಾಡಿ ಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆ ಮೂಲಕ ಪ್ರಮೋದ್ ಮಧ್ವರಾಜ್ ಸಾರ್ವಜನಿಕರಿಂದ ಈ ರೀತಿಯ ಅಪರಾಧ ಮಾಡಿಸಲು ಪ್ರೇರಣೆ ಮಾಡುತ್ತಾ, ದ್ವೇಷ ಭಾವನೆಯಿಂದ ಭಾಷಣ ಮಾಡಿ ದೊಂಬಿಯ ಅಪರಾಧವು ನಡೆಯುವ ಸಂಭವ ಇದೆ ಎಂದು ತಿಳಿದು, ಅಲ್ಲಿದ್ದವರನ್ನು ಪ್ರಚೋದಿಸುತ್ತ ಉದ್ರೇಕ ಭಾಷಣ ಮಾಡಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ 57, 191(1), 192. ಬಿಎನ್‌ಎಸ್‌ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.