KARNATAKA
ಸೂರಜ್ ರೇವಣ್ಣ ವಿರುದ್ಧ ದೌರ್ಜನ್ಯ ಆರೋಪ ಮಾಡಿದ ವ್ಯಕ್ತಿ ವಿರುದ್ಧವೇ ಎಫ್‌ಐಆರ್!
ಹಾಸನ: ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವಿರುದ್ಧ ಸಲಿಂಗಕಾಮ, ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ಡಿಜಿಪಿ, ಎಸ್‌ಪಿ, ಸಿಎಂ ಹಾಗೂ ಗೃಹ ಸಚಿವರಿಗೆ ದೂರು ಸಲ್ಲಿಕೆಯಾಗಿದೆ. ಮತ್ತೊಂದೆಡೆ ದೂರು ಸಲ್ಲಿಸಿದ ವ್ಯಕ್ತಿಯ ವಿರುದ್ಧವೇ ಎಫ್‌ಐಆರ್ ದಾಖಲಾಗಿದೆ.
ಐದು ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿರುವ ಯುವಕನ ವಿರುದ್ಧ ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದು. ಐಪಿಸಿ ಸೆಕ್ಸೆನ್ 384, 506 ರ ಅಡಿಯಲ್ಲಿ 168/2024 ರಡಿ ಕೇಸ್ ದಾಖಲಾಗಿದೆ.
ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಮಾಡಿರೋದಾಗಿ ಸುಳ್ಳು ಹೇಳೋದಾಗಿ ಬೆದರಿಸಿ, ಐದು ಕೋಟಿ ಹಣಕ್ಕೆ ಆ ಯುವಕ ಬೇಡಿಕೆ ಇಟ್ಟಿದ್ದ ಅಂತ ಆರೋಪಿಸಲಾಗಿದೆ. ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ಎಂಬುವರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಅರಕಲಗೂಡು ಮೂಲದ ಯುವಕನೊಬ್ಬ ನಿಮ್ಮ ಬಾಸ್ ಬಳಿ ಕೆಲಸ ಕೊಡಿಸು ಎಂದು ಕೇಳಿಕೊಂಡಿದ್ದ. ನೀನೇ ಹೋಗಿ ಬಾಸ್ ಭೇಟಿ ಮಾಡು ಎಂದು ಫೊನ್ ನಂಬರ್ ಕೊಟ್ಟಿದ್ದೆ ಎಂದು ದೂರಿನಲ್ಲಿ ಶಿವಕುಮಾರ್ ತಿಳಿಸಿದ್ದಾರೆ.
ಐದು ಕೋಟಿ ಬಳಿಕ ಮೂರು ಕೋಟಿ ಅಥವಾ ಕಡೆಗೆ ಎರಡೂವರೆ ಕೋಟಿಯಾದ್ರು ಹಣ ಕೊಡಿಸು ಎಂದು ಡಿಮ್ಯಾಂಡ್ ಮಾಡಿದ್ದಾನೆ. ಹಣ ಕೊಡಿಸದಿದ್ದರೆ ದೊಡ್ಡ ಕುಟುಂಬವಾದ ಅವರ ಮರ್ಯಾದೆ ಕಳೆಯುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡಿದ ಬಗ್ಗೆ ದೂರು ಸಲ್ಲಿಸಲಾಗಿದೆ ಎಂದು ಸೂರಜ್ ಆಪ್ತ ಹೇಳಿದ್ದಾರೆ.