ಪುಣೆ ಎಪ್ರಿಲ್ 14: ಮಗು ತನ್ನನ್ನು ಹೋಲುತ್ತಿಲ್ಲ ಎಂಬ ಕೇವಲ ಅನುಮಾನದಿಂದ ತಂದೆಯೊಬ್ಬ ತನ್ನ ಆರು ವರ್ಷದ ಮಗನನ್ನೇ ಕೊಂದು ಶವವನ್ನು ಕೃಷ್ಣಾ ನದಿಗೆ ಎಸೆದ ಭೀಕರ ಘಟನೆ ನಾಗಠಾಣೆ ಗ್ರಾಮದಲ್ಲಿ ನಡೆದಿದೆ. ಸಿದ್ಧಾರ್ಥ್ (6) ಕೊಲೆಯಾದ ಮಗು. ತಂದೆ ಮಲ್ಲಿಕಾರ್ಜುನ ಅರೆಕೇರಿ ಬಂಧಿತ ಆರೋಪಿ.

ವಿಜಯಪುರ ಜಿಲ್ಲೆಯ ನಾಗಠಾಣೆ ಗ್ರಾಮದ ಮಲ್ಲಿಕಾರ್ಜುನ ಆರೇಕರಿ ಮತ್ತು ಭಾಗ್ಯಶ್ರೀ ದಂಪತಿಯ ಆರು ವರ್ಷದ ಮಗ ಸಿದ್ಧಾರ್ಥ್. ಸುಂದರವಾಗಿದ್ದ ಆ ಮಗು ತನ್ನ ತಂದೆಯನ್ನೇ ಹೋಲುತ್ತಿಲ್ಲ ಎಂದು ಕೆಲವು ಪರಿಚಯಸ್ಥರು ಹೇಳಿದ್ದ ಹಿನ್ನಲೆಯಲ್ಲಿ ಮಲ್ಲಿಕಾರ್ಜುನನ ತಲೆಯಲ್ಲಿ ವಿಷ ಬಿತ್ತಿತ್ತು. ಕಳೆದ ಒಂದೂವರೆ ವರ್ಷಗಳಿಂದ ಇದೇ ವಿಷಯಕ್ಕೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಕೊನೆಗೆ ಈ ಸಂಶಯ ಕೊಲೆಯಲ್ಲಿ ಅಂತ್ಯವಾಯಿತು.
ಮಾರ್ಚ್ 16ರಂದು ಮಗುವನ್ನು ಶಾಲಾ ಪ್ರವೇಶಕ್ಕೆ ಕರೆದೊಯ್ಯುವುದಾಗಿ ಸುಳ್ಳು ಹೇಳಿ ಮಹಾರಾಷ್ಟ್ರದ ಕರಾಡ್ಗೆ ಕರೆದೊಯ್ದಿದ್ದ ಮಲ್ಲಿಕಾರ್ಜುನ, ಅಲ್ಲಿನ ವಡೋಲಿ ಭಿಕೇಶ್ವರ ಬಳಿ ಮಗುವನ್ನು ನದಿಗೆ ತಳ್ಳಿದ್ದಾನೆ. ಮಾರ್ಚ್ 18 ರಂದು ಕರಾಡ್ ಪೊಲೀಸರಿಗೆ ನದಿಯ ದಡದಲ್ಲಿ ಮಗುವಿನ ಗುರುತು ಪತ್ತೆಯಾಗದ ಶವ ಸಿಕ್ಕಿತ್ತು.
ಮನೆಯಲ್ಲಿ ಮಗು ಹಾಸ್ಟೆಲ್ನಲ್ಲಿದೆ ಎಂದು ಪತ್ನಿಗೆ ನಂಬಿಸಿ ಎರಡು ವಾರ ಕಾಲ ನಾಟಕವಾಡಿದ್ದ. ಏಪ್ರಿಲ್ 1ರಂದು ಮಗುವಿನ ಹುಟ್ಟುಹಬ್ಬದ ದಿನ ತಾಯಿ ಮಗುವನ್ನು ನೋಡಬೇಕೆಂದು ಹಠ ಹಿಡಿದಾಗ ಆರೋಪಿಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿದೆ. ಇದರಿಂದ ಅನುಮಾನಗೊಂಡ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ತಾಂತ್ರಿಕ ತನಿಖೆಯಲ್ಲಿ ಆರೋಪಿಯ ಮೊಬೈಲ್ ಲೊಕೇಶನ್ ಮಹಾರಾಷ್ಟ್ರದಲ್ಲಿ ಪತ್ತೆಯಾದಾಗ ಸತ್ಯಾಂಶ ಹೊರಬಂದಿದೆ. ವಿಜಯಪುರ ಗ್ರಾಮೀಣ ಡಿವೈಎಸ್ಪಿ ಟಿ.ಎಸ್. ಸುಲ್ಪಿ ನೇತೃತ್ವದಲ್ಲಿ ತನಿಖೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.