LATEST NEWS
ರಸ್ತೆ ಕಾಮಗಾರಿಗೆ ಬೃಹತ್ ಮರ ಧರೆಗೆ – ನೂರಾರು ಹಕ್ಕಿಗಳ ಮಾರಣಹೋಮ
ತಿರುವನಂತಪುರಂ: ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭ ಬೃಹತ್ ಮರವನ್ನು ಕಡಿದ ಪರಿಣಾಮ ಮರದಲ್ಲಿದ್ದ ನೂರಾರು ಪಕ್ಷಿಗಳು ಸಾವನಪ್ಪಿರುವ ಘಟನೆ ನಡೆದಿದ್ದು, ಪಕ್ಷಿಗಳ ಮಾರಣಹೋಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿ 66 ಅನ್ನು ವಿಸ್ತರಣೆ ಮಾಡುವ ಸಲುವಾಗಿ ರಸ್ತೆ ಬದಿಯ ಮರಗಳನ್ನು ಕಡಿಯಲಾಗುತ್ತಿತ್ತು. ಅಂತೆಯೇ ಗುರುವಾರ ಭಾರೀ ಗಾತ್ರದ ಮರವನ್ನು ನೆಲಕ್ಕುರುಳಿಸಿದರಿಂದ ನೂರಾರು ಪಕ್ಷಿಗಳು ಸಾವನ್ನಪ್ಪಿವೆ. ಸಾವಿರಾರು ಪಕ್ಷಿಗಳ ಮಾರಣಹೋಮವಾಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಪಕ್ಷಿಪ್ರಿಯರು ಆಕ್ರೋಶ ಹೊರಹಾಕಿದ್ದಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಮರ ಉರುಳಿಸಿದ ಜೆಸಿಬಿ ಚಾಲಕನನ್ನು ಬಂಧಿಸಲಾಗಿದೆ. ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಪಡೆಯದೇ ಮರವನ್ನು ಉರುಳಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಹುಣಸೆ ಮರದಲ್ಲಿ ಶಿಳ್ಳೆ ಹೊಡೆಯುವ ಬಾತುಕೋಳಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ಗೂಡುಕಟ್ಟಿಕೊಂಡು ಬದುಕು ನಡೆಸುತ್ತಿದ್ದವು. ಈ ಬಡ ಜೀವಿಗಳ ಜೀವನದ ಬಗ್ಗೆ ಹೆಚ್ಚು ಗಮನ ಹರಿಸದ ಜನರ ಮೇಲೆ ಇದೀಗ ನೆಟ್ಟಿಗರು ಗರಂ ಆಗಿದ್ದಾರೆ. ಈ ಪಕ್ಷಿಗಳನ್ನು ಉಳಿಸಲು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳದೆ ಮರವನ್ನು ಉರುಳಿಸಲು ನಿರ್ಧರಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.