LATEST NEWS
ಮಂಗಳೂರಿನಲ್ಲೂ ಪತ್ತೆಯಾದ ನಕಲಿ ಮತದಾರರು
ಮಂಗಳೂರಿನಲ್ಲೂ ಪತ್ತೆಯಾದ ನಕಲಿ ಮತದಾರರು
ಮಂಗಳೂರು ಮೇ 11: ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಕಲಿ ಮತದಾರರ ಗುರುತಿನ ಚೀಟಿ ಪತ್ತೆಯಾದ ನಂತರ ಮಂಗಳೂರಿನಲ್ಲೂ ಅಕ್ರಮವಾಗಿ ನಕಲಿ ಮತದಾರರ ಸೃಷ್ಠಿಸಿ ಚುನಾವಣಾ ಅಕ್ರಮದಲ್ಲಿ ತೊಡಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮಂಗಳೂರಿಗೆ ಶೈಕ್ಷಣಿಕ ಉದ್ದೆಶ ದಿಂದ ಬರುವ ಕೇರಳ ಮೂಲದ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಚುನಾವಣಾ ಅಕ್ರಮದಲ್ಲಿ ತೊಡಗಿರುವ ಆರೋಪ ಈ ಹಿಂದಿ ನಿಂದಲೂ ಕೇಳಿಬರುತ್ತಿದೆ. ಆದರೆ ಈಗ ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿಗೆ ವಿಧ್ಯಾಭ್ಯಾಸಕ್ಕೆ ಬರುವ ಕೇರಳ ಮೂಲದ ವಿಧ್ಯಾರ್ಥಿಗಳನ್ನು ಈ ನಕಲಿ ಮತದಾರರ ಅಕ್ರಮ ದಂಧೆಗೆ ಬಳಸಿಕೊಳ್ಳಲಾಗುತ್ತಿದೆ. ಒಂದೇ ವ್ಯಕ್ತಿಯ ಹೆಸರಲ್ಲಿ ಎರಡು ಮತದಾರರ ಗುರುತಿನ ಚೀಟಿಯ ಮೂಲಕ ಚುನಾವಣೆಯಲ್ಲಿ ಅಕ್ರಮ ಮತ ಚಲಾಯಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇರಳ ಮೂಲದ ಯುವತಿ ವಿರುದ್ಧ ಮಂಗಳೂರು ಪೂರ್ವ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರಿನ ಬಲ್ಮಠ ನಿವಾಸಿ ಪ್ರವೀಣ್ ಶೇಟ್ ಎಂಬವರು ದೂರು ನೀಡಿದ್ದಾರೆ.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಮಾರಿ ದೀನಾ ಶಾಜಿ ಎಂಬವರು ಎರಡು ಮತದಾರರ ಚೀಟಿಗಳನ್ನು ಹೊಂದಿದ್ದಾರೆ. ಒಂದು ಚೀಟಿಯಲ್ಲಿ ಮಂಗಳೂರಿನ ಬಲ್ಮಠ ಎಂದು ವಿಳಾಸ ನಮೂದಿಸಿ ಕ್ಷೇತ್ರದ 153ನೇ ವಿಭಾಗದಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಅದೇರೀತಿ ಇನ್ನೊಂದು ಮತದಾರರ ಚೀಟಿಯನ್ನು ಹೊಂದಿದ್ದು ಅದು ಕೇರಳ ರಾಜ್ಯದಲ್ಲಿ ನೋಂದಾಯಿಸಲ್ಪಟ್ಟಿದೆ. ಹೀಗಾಗಿ ದೀನಾ ಶಾಜಿಯವರು ಉದ್ದೇಶ ಪೂರ್ವಕವಾಗಿ ಅಥವಾ ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿದು ಚುನಾವಣೆಯಲ್ಲಿ ಅಕ್ರಮ ಎಸಗಲು ಮುಂದಾಗಿದ್ದಾರೆ ಎಂದು ಅರೋಪಿಸಲಾಗಿದೆ.
ಕಾನೂನು ಬಾಹಿರ ಕೃತ್ಯ ಎಸಗಿದ ಕುಮಾರಿ ದೀನಾ ಶಾಜಿ ವಿರುದ್ಧ ಮಂಗಳೂರಿನ ಪೂರ್ವ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಚುನಾವಣಾ ಅಧಿಕಾರಿಗಳು ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆ ಕೈಗೊಂಡಿದ್ದಾರೆ.
ಅಲ್ಲದೆ ಅಕ್ರಮ ಬಾಂಗ್ಲಾ ವಲಸಿಗರಿಗೂ ಕೂಡ ಮತದಾರರ ಗುರುತಿ ಚೀಟಿಯನ್ನು ನೀಡಲಾಗಿದ್ದು ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.