LATEST NEWS
ಮಂಗಳೂರು – ಪಾಲಿಕೆ ಅಧಿಕಾರಿಗಳ ಹೆಸರಿನಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಕಳವು…!!

ಮಂಗಳೂರು ನವೆಂಬರ್ 19: ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿಗಳೆಂದು ಹೇಳಿಕೊಂಡ ತಂಡವೊಂದು ಮನೆಗೆ ನುಗ್ಗಿ ನಗದು ಮತ್ತು ಚಿನ್ನಾಭರಣ ದೋಚಿದ ಘಟನೆ ನಡೆದಿದೆ.
ದಡ್ಡಲ್‌ಕಾಡ್ ನಿವಾಸಿ ಮೀರಾ ಪೈ ಅವರ ಮನೆಗೆ ನವೆಂಬರ್ 16 ರಂದು ಇಬ್ಬರು ಅಪರಿಚಿತರು ಬಂದಿದ್ದು, ನಾವು ಪಾಲಿಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು. ನಿಮ್ಮ ಮನೆಯ ಸುತ್ತ ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಲು ಬಂದಿದ್ದೇವೆ’ ಎಂದು ಹೇಳಿದ್ದರು. ಬಳಿಕ ಮನೆಯ ಟೆರಸಿಗೂ ತೆರಳಿ ನೀರಿನ ಟ್ಯಾಂಕ್ ಪರಿಶೀಲಿಸಿದ್ದಾರೆ. ಮಹಿಳೆ ಹಾಗೂ ಆರೋಪಿಗಳು ಟೆರಸಿಗೆ ತೆರಳಿದಾಗ, ಇನ್ನೊಬ್ಬ ಆರೋಪಿ ನೇರವಾಗಿ ಮನೆಗೆ ಪ್ರವೇಶಿಸಿದ್ದಾನೆ.

ಕಪಾಟಿನ ಬಾಗಿಲು ತೆರೆದು 68 ಗ್ರಾಂ ಚಿನ್ನಾಭರಣ ಮತ್ತು ₹71 ಸಾವಿರ ನಗದು ದೋಚಿದ್ದಾರೆ. ಮಹಿಳೆ ಮನೆಯೊಳಗೆ ಬಂದ ಬಳಿಕ ಕಳವು ಮಾಡಿರುವುದು ಗೊತ್ತಾಗಿದೆ.ಈ ಬಗ್ಗೆ ಸ್ಥಳೀಯರಿಗೆ ಅನುಮಾನ ಬಂದಿದ್ದು, ಮಹಾನಗರ ಪಾಲಿಕೆಯ ಸಿಬ್ಬಂದಿ ಎಂಬುದಕ್ಕೆ ದಾಖಲೆ ಕೊಡಿ ಎಂದಾಗ ಇಬ್ಬರೂ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.