LATEST NEWS
ಮಂಗಳೂರಿನಲ್ಲಿ ನಕಲಿ ನೋಟು ಜಾಲ – ಇಬ್ಬರು ಪೊಲೀಸ್ ಬಲೆಗೆ

ಮಂಗಳೂರು ಜನವರಿ 3: ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕದ್ರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಸೋಮವಾರ ನಗರದ ನಂತೂರು ಜಂಕ್ಷನ್ ಬಳಿ ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಖೋಟಾ ನೋಟುಗಳನ್ನು ಚಲಾವಣೆಯ ಜಾಲ ಬಯಲಿಗೆ ಬಂದಿದೆ ಎಂದು ಮಾಹಿತಿ ನೀಡಿದರು.
ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ನಿವಾಸಿ ನಿಝಾಮುದ್ದೀನ್ ಯಾನೆ ನಿಝಾಮ್ (32), ಜಪ್ಪುವಿನ ರಝೀಮ್ ಯಾನೆ ರಾಫಿ (31) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 500 ರೂ. ಮುಖಬೆಲೆಯ 4.50 ಲಕ್ಷ ರೂ. ಖೋಟಾ ನೋಟುಗಳನ್ನು ವಶಪಡಿಸಲಾಗಿದೆ ಎಂದರು.

ಬೆಂಗಳೂರಿನ ಡ್ಯಾನಿಯಲ್ ಎಂಬಾತನಿಂದ ಖೋಟಾ ನೋಟುಗಳನ್ನು ಪಡೆದಿರುವ ಆರೋಪಿಗಳು ನಗರದಲ್ಲಿ ಸ್ಕೂಟರ್‌ವೊಂದನ್ನು ಕದ್ದು ಅದರಲ್ಲಿ ಹಣ ಚಲಾವಣೆಗೆ ಯತ್ನಿಸುತ್ತಿದ್ದರು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.