LATEST NEWS
ಗುಜರಾತ್ ನಲ್ಲಿ 5 ವರ್ಷದಿಂದ ನಡೆಯುತ್ತಿದ್ದ ನಕಲಿ ಕೋರ್ಟ್ – ನಕಲಿ ನ್ಯಾಯಾಧೀಶ ಅರೆಸ್ಟ್
ಗುಜರಾತ್ ಅಕ್ಟೋಬರ್ 23: ನಕಲಿ ಪೊಲೀಸ್, ನಕಲಿ ಸಿಬಿಐ ಕೇಳಿದ್ದೀರಿ ಆದರೆ ಹೈಕೋರ್ಟ್ ನಲ್ಲಿ ನಕಲಿ ಕೋರ್ಟ್ ಒಂದು ಕಳೆದ 5 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸುದ್ದಿಯಾಗಿದ್ದು, ನಕಲಿ ನ್ಯಾಯಾಧೀಶರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಗುಜರಾತ್‌ನಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ನಕಲಿ ನ್ಯಾಯಾಲಯವನ್ನು ನಡೆಸುತ್ತಿದ್ದ ಮತ್ತು ಆದೇಶವನ್ನು ನೀಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಮಂಗಳವಾರ ಬಂಧಿಸಲಾಗಿದೆ. ಪೊಲೀಸರು ದೂರು ದಾಖಲಿಸಿದ ನಂತರ ಅಹಮದಾಬಾದ್ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆಗೆ ಬಂದ ನಂತರ ವಿಷಯ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ, ಆರೋಪಿಯನ್ನು ಮೋರಿಸ್ ಸ್ಯಾಮ್ಯುಯೆಲ್ ಕ್ರಿಶ್ಚಿಯನ್ ಎಂದು ಗುರುತಿಸಲಾಗಿದ್ದು, 2019 ರಿಂದ ವಿಶೇಷವಾಗಿ ಗಾಂಧಿನಗರ ಪ್ರದೇಶದಲ್ಲಿ ಭೂ ವ್ಯವಹಾರಗಳಲ್ಲಿ ‘ತೀರ್ಪು’ಗಳನ್ನು ನೀಡುತ್ತಿದ್ದಾನೆ.
ಕ್ರಿಶ್ಚಿಯನ್ ಅಹಮದಾಬಾದ್‌ನಲ್ಲಿ ನಕಲಿ ಮಧ್ಯಸ್ಥಿಕೆ ಕೇಂದ್ರವನ್ನು ಸ್ಥಾಪಿಸಿ ಸರ್ಕಾರಿ ಭೂಮಿಯಲ್ಲಿ ಆದೇಶವನ್ನು ನೀಡಿದ್ದರು. ಆರೋಪಿ ಮೋರಿಸ್ ಸ್ಯಾಮ್ಯುಯೆಲ್ ಕ್ರಿಶ್ಚಿಯನ್ ಸ್ವತಃ ನ್ಯಾಯಾಧೀಶರಾಗಿ ನಟಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಭೂ ವಿವಾದ ಪ್ರಕರಣಗಳಲ್ಲಿ ನೇಮಕವಾದ ಮಧ್ಯಸ್ತಿಕೆದಾರ ಎಂದು ಬಿಂಬಿಸಿಕೊಂಡಿದ್ದ. ತನಗೆ ಹಣ ಕೊಟ್ಟವರ ಪರವಾಗಿ ತೀರ್ಪುಗಳನ್ನು ಹೊರಡಿಸಿ ಜನರನ್ನು ವಂಚಿಸುತ್ತಿದ್ದ. ಈ ಸಂಬಂಧ ಇಲ್ಲಿನ ಸಿಟಿ ಸಿವಿಲ್ ಕೋರ್ಟ್‌ನ ರಿಜಿಸ್ಟ್ರಾರ್ ನೀಡಿದ ದೂರಿನ ಮೇರೆಗೆ ಪೊಲೀಸರು ನಕಲಿ ಕೋರ್ಟನ್ನು ಪತ್ತೆ ಹಚ್ಚಿದ್ದಾರೆ.
2019ರಲ್ಲಿ ವ್ಯಕ್ತಿಯೊಬ್ಬ ಸರ್ಕಾರಿ ಜಮೀನಿನ ಮೇಲೆ ಹಕ್ಕು ಸಾಧಿಸಿ ಕಂದಾಯ ಇಲಾಖೆಯಲ್ಲಿ ತನ್ನ ಹೆಸರು ಸೇರಿಸಲು ಬಯಸಿದ್ದ. ಈ ಪ್ರಕರಣದಲ್ಲಿ ಹಣ ಪಡೆದು ಮೋರಿಸ್ ಆತನ ಪರವಾಗಿ ತೀರ್ಪು ನೀಡಿದ್ದ. ಈ ಆದೇಶ ಜಾರಿಗೆ ವಕೀಲರೊಬ್ಬರ ಮೂಲಕ ಅಹಮದಾಬಾದ್ ಸಿಟಿ ಸಿವಿಲ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದ. ಈ ದಾಖಲೆ ಪರಿಶೀಲಿಸಿದಾಗ ರಿಜಿಸ್ಟ್ರಾರ್‌ಗೆ ಇದು ನಕಲಿ ತೀರ್ಪು ಎಂದು ಗೊತ್ತಾಗಿತ್ತು.