LATEST NEWS
ಮಂಗಳೂರಿನಲ್ಲಿ ಮತ್ತೆ ನಕಲಿ ಅಧಿಕಾರಿಗಳ ಹಾವಳಿ ಈ ಬಾರಿ ಸಿಕ್ಕಿ ಬಿದ್ದಿದ್ದು ನಕಲಿ ಸೇನಾ ಅಧಿಕಾರಿ
ಮಂಗಳೂರಿನಲ್ಲಿ ಮತ್ತೆ ನಕಲಿ ಅಧಿಕಾರಿಗಳ ಹಾವಳಿ ಈ ಬಾರಿ ಸಿಕ್ಕಿ ಬಿದ್ದಿದ್ದು ನಕಲಿ ಸೇನಾ ಅಧಿಕಾರಿ
ಮಂಗಳೂರು ನವೆಂಬರ್ 25: ಮಂಗಳೂರಿನಲ್ಲಿ ನಕಲಿ ಅಧಿಕಾರಿಗಳ ಹಾವಳಿ ಮುಂದುವರೆದಿದೆ.ಈಗ ಭಾರತೀಯ ಸೇನಾ ಅಧಿಕಾರಿ ಎಂದು ಹೇಳಿಕೊಂಡು ಸಾರ್ವಜನಿಕರನ್ನು ವಂಚಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಭಾರತೀಯ ಸೇನಾ ಗುಪ್ತದಳದ ಅಧಿಕಾರಿಗಳು ಮತ್ತು ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ವ್ಯಕ್ತಿಯನ್ನು ಸುರತ್ಕಲ್ ಸಮೀಪದ ಶ್ರೀಕೃಷ್ಣ ಎಸ್ಟೇಟ್ ನಿವಾಸಿ ಮಂಜುನಾಥ ರೆಡ್ಡಿ ಎಂದು ಗುರುತಿಸಲಾಗಿದೆ.
ಭಾರತೀಯ ಸೇನೆಯ ಅಧಿಕಾರಿ ಎಂದು ಬಿಂಬಿಸಿಕೊಳ್ಳುವುದರ ಜತೆಗೆ, ಸೇನಾ ಸಮವಸ್ತ್ರ ಧರಿಸಿ ಓಡಾಡುತ್ತಿದ್ದ. ಸುರತ್ಕಲ್‌ನ ಲಾರ್ಡ್ ಕೃಷ್ಣ ಎಸ್ಟೇಟ್‌ನ ಬಾಡಿಗೆ ಮನೆಯಲ್ಲಿ ಈತ ವಾಸವಾಗಿದ್ದ. ಹುತಾತ್ಮ ಯೋಧರ ಕುಟುಂಬದವರಿಗೆ ಸನ್ಮಾನ ಸಮಾರಂಭಗಳನ್ನು ಆಯೋಜಿಸಿ ಅವರ ವಿಶ್ವಾಸ ಗಳಿಸುತ್ತಿದ್ದ.
ಬಳಿಕ ಕುಟುಂಬದ ಸದಸ್ಯರಿಗೆ ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಹಣ ಪಡೆದು ವಂಚಿಸುತ್ತಿದ್ದ. ಖಚಿತ ಮಾಹಿತಿ ಆಧರಿಸಿ ಆರೋಪಿ ವಾಸವಿದ್ದ ಬಾಡಿಗೆ ಮನೆಯ ಮೇಲೆ ದಾಳಿ ನಡೆಸಿದಾಗ, ಅಲ್ಲಿ ಸೇನಾ ಸಿಬ್ಬಂದಿಯ ಸಮವಸ್ತ್ರ, ನಕಲಿ ಗುರುತಿನ ಚೀಟಿಗಳು, ಸೇನೆಯ ಹೆಸರಿನಲ್ಲಿರುವ ನಕಲಿ ರಬ್ಬರ್ ಸ್ಟಾಂಪ್ ಪತ್ತೆಯಾಗಿವೆ. ಆರೋಪಿಯನ್ನು ಬಂಧಿಸಲಾಗಿದ್ದು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಹಿಂದೆ ಬೃಹತ್ ವಂಚಕ ಜಾಲ ಇರುವ ಸಾಧ್ಯತೆಯಿದ್ದು, ಈತನೊಬ್ಬನೇ ಕೆಲಸ ಮಾಡಿದಂತಿಲ್ಲ.
ಈ ಕುರಿತು ಪೊಲೀಸರು ಮತ್ತು ಸೇನಾ ಗುಪ್ತದಳ ತನಿಖೆ ಮುಂದುವರಿಸಲಿದೆ. ಸೇನೆಯಲ್ಲಿ ಯಾವುದೇ ರೀತಿಯ ನೇಮಕಾತಿಗಳಿಗೆ ಯಾರಿಂದಲೂ ಹಣ ಸಂಗ್ರಹಿಸುವುದಿಲ್ಲ. ಮಧ್ಯವರ್ತಿಗಳಿಗೂ ಅವಕಾಶವಿಲ್ಲ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.
ತಾನು ಬೆಳಗಾವಿಯ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟಲ್ ಸೆಂಟರ್‌ನಲ್ಲಿ ಸಿವಿಲ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದು, ನಾಯ್ಕ ಸುಬೇದಾರ್, ಸುಬೇದಾರ್, ಸುಬೇದಾರ್ ಮೇಜರ್ ಹುದ್ದೆಗಳಲ್ಲಿ ತನ್ನನ್ನು ನಿಯೋಜಿಸಲಾಗಿದೆ ಎಂದು ವಿಚಾರಣೆ ವೇಳೆ ಆತ ತಿಳಿಸಿದ್ದಾನೆ.