DAKSHINA KANNADA
ಹಿಂದೂಗಳು ತಿರುಗಿಬಿದ್ದರೆ ರಾಜ್ಯದಲ್ಲಿ ಮುಸ್ಲೀಮರ ಒಂದೇ ಒಂದು ಮನೆ ಉಳಿಯದು: ಈಶ್ವರಪ್ಪ
ಮಂಗಳೂರು, ಮಾರ್ಚ್ 14: ‘ಹಿಂದು ಸಮಾಜ ತಿರುಗಿ ಬಿದ್ದರೆ ರಾಜ್ಯದಲ್ಲಿ ಮುಸ್ಲೀಮರ ಒಂದೇ ಒಂದು ಮನೆಯೂ ಉಳಿಯುವುದಿಲ್ಲ’ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು.
ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಕಾವೂರಿನ ಶಾಂತಿನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ‘ದೇಶದ್ರೋಹಿಗಳನ್ನು ಒದ್ದು ಒಳಗೆ ಹಾಕಿದ ಸರ್ಕಾರ ನಮ್ಮದು. ಪಿಎಫ್‌ಐ ನಿಷೇಧಿಸಿದ್ದು ಬಿಜೆಪಿ ಸರ್ಕಾರ. ಸುಮ್ಮನೆ ಈ ಸಂಘಟನೆಯನ್ನು ನಿಷೇಧಿಸಿಲ್ಲ. ಹಿಂದೂ ಯುವಕರ ಜೀವಕ್ಕೆ ಬೆಲೆ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಹಾಗಾಗಿಯೇ ಈ ನಿರ್ಧಾರ ಕೈಗೊಂಡಿದ್ದೇವೆ. ಗೋಹತ್ಯೆ ಮಾಡುವವರ ಮನೆಯ ಮೇಲೆ ಬುಲ್‌ಡೋಜ್ ಓಡಿಸಿ ಯಶಸ್ವಿಯಾದ ರಾಜ್ಯದ ಮೊದಲ ಶಾಸಕ ಭರತಣ್ಣ’ ಎಂದರು.
‘ಹಿಂದೂಗಳ ಸುದ್ದಿಗೆ ಬಂದರೆ ನಾವು ಸುಮ್ಮನೆ ಬಿಡುವುದಿಲ್ಲ. ಒಂದು ಕಾಲದಲ್ಲಿ ಹಿಂದೂ ಕಾರ್ಯಕರ್ತರು ಶಾಖೆಗೆ ಹೋದರೆ ಕೊಂದು ಹಾಕುತ್ತಿದ್ದರು. ಹಿಂದು ಸಮಾಜ ಜಾಗೃತವಾಗಿರಲಿಲ್ಲ. ಈಗ ಯಾವನಾದರೂ ಬರಲಿ ನೊಡೋಣ. ಅವರು ಯಾವುದರಲ್ಲಿ ಹೊಡೆಯುತ್ತಾರೋ ಅದರಲ್ಲೇ ಹೊಡೆದು ಮುಗಿಸಿ ಬಿಡುತ್ತಾರೆ. ನಮ್ಮ ಕಾರ್ಯಕರ್ತರನ್ನು ಮುಟ್ಟಿದರೆ ಜೀವಂತ ಉಳಿಯಲ್ಲ. ಕೆಣಕಿದರೆ ಪುಡಿ ಪುಡಿ ಆಗುತ್ತೇವೆ ಎಂದು ಗೊತ್ತು. ಹಾಗಾಗಿ ಯಾರೂ ನಮ್ಮ ಸುದ್ದಿಗೆ ಬರುತ್ತಿಲ್ಲ’ ಎಂದರು.
‘ಹಿಂದೂ ಪರ ಎಂದೇ ನಾವು ಮತ ಯಾಚಿಸುತ್ತೇವೆ. ನಮಗೆ ಮುಸ್ಲೀಮರ ಮತವೇ ಬೇಡ. ಕೇವಲ ಹಿಂದೂಗಳ ಮತದಲ್ಲೇ ನಾವು ಗೆಲ್ಲುತ್ತೇವೆ. ನೀವು ಮುಸ್ಲೀಮರ ಪರ ಎಂದು ಹೇಳಿಕೊಳ್ಳಲು ಸಿದ್ದರಿದ್ದೀರಾ’ ಎಂದು ಅವರು ಕಾಂಗ್ರೆಸ್‌ನವರನ್ನು ಉದ್ದೇಶಿಸಿ ಸವಾಲು ಹಾಕಿದರು.
‘ಕಾಶಿ ವಿಶ್ವನಾಥ ದೇವಸ್ಥಾನ ಪಕ್ಕದಲ್ಲಿ ಅರ್ಧ ದೇವಸ್ಥಾನ ಒಡೆದು ಮಸೀದಿ ನಿರ್ಮಿಸಲಾಗಿದೆ. ಮಥುರಾದಲ್ಲೂ ಇದೇ ಹಣೆಬರೆಹ. ಎಲ್ಲೆಲ್ಲಿ ನಮ್ಮ ದೇವಸ್ಥಾನ ಕಿತ್ತುಹಾಕಿ ಮಸೀದಿ ಕಟ್ಟಿದ್ದಾರೋ, ಆ ಎಲ್ಲ ಮಸೀದಿ ಕಿತ್ತುಹಾಕಿ ದೇವಸ್ಥಾನ ಕಟ್ಟೇ ಕಟ್ಟುತ್ತೇವೆ. ದೇವರ ಮೇಲೆ ಆಣೆ. ಈ ಬಗ್ಗೆ ಅನುಮಾನವೇ ಬೇಡ’ ಎಂದರು.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ‘ ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಮೂಲಸೌಕರ್ಯ ಮತ್ತು ಮಾನವ ಅಭಿವೃದ್ಧಿಗೆ ಒತ್ತು ನೀಡಿದೆ. ಮೊದಲ ಸಲ ಸಾಮಾನ್ಯ ಜನರಿಗೂ ನೇರ ಸವಲತ್ತು ವರ್ಗಾವಣೆ ಸೌಲಭ್ಯ ಸಿಕ್ಕಿದೆ. ಕಿಸಾನ್ ಸಮ್ಮಾನ್ ಮೂಲಕ ರೈತರನ್ನು, ಐಐಟಿ, ವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜು ಸ್ಥಾಪನೆಯ ಮೂಲಕ ಯುವಜನರನ್ನು ಸದೃಢಗೊಳಿಸಲಾಗುತ್ತಿದೆ. ನವಭಾರತ ನಿರ್ಮಾಣ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ‘ ಎಂದರು.
‘ಕಾಂಗ್ರೆಸ್‌ನ ಅಧಿಕಾರಕ್ಕೆ ಬರುವುದಿಲ್ಲ. ಹಾಗಾಗಿಯೇ ಉಚಿತ ವಿದ್ಯುತ್ ಪೂರೈಸುವ ಭರವಸೆ ನೀಡಿದೆ. ಗೋವಾದಲ್ಲಿ ಅವರ ಈ ತಂತ್ರ ಫಲಿಸಿಲ್ಲ’ ಎಂದರು. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದ.ಕ. ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ‘ಕಮಿಷನ್‌ಗಾಗಿ ಕಾಮಗಾರಿ ಮಾಡುತ್ತಿದ್ದಾರೆ ಎಂದು ರಮಾನಾಥ ರೈ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಆದ ಅಭಿವೃದ್ಧಿ ಎಷ್ಟು. ಈಗ ಆಗಿರುವ ಅಭಿವೃದ್ಧಿ ಎಷ್ಟು ಉತ್ತರ ಕೊಡಿ’ ಎಂದು ಸವಾಲು ಹಾಕಿದರು. ಜಯಾನಂದ ಅಂಚನ್ ಹಾಗೂ ಪಕ್ಷದ ಪ್ರಮುಖರು ಇದ್ದರು.