Connect with us

    KARNATAKA

    ಸರ್ಕಾರಿ ಕೆಲಸ ಕೊಡಿಸುವುದಾಗಿ ₹ 2 ಕೋಟಿ ವಸೂಲಿ: ಸಿಐಡಿ ಅಧಿಕಾರಿ ಅನಿತಾ, ಮಧ್ಯವರ್ತಿ ಸೆರೆ

    ಬೆಂಗಳೂರು: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವಕರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ಸಿಐಡಿ ಘಟಕದ ಸೆಕ್ಷನ್‌ ಸೂಪರಿಂಟೆಂಡೆಂಟ್‌ ಸೇರಿ ಇಬ್ಬರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಬೆಂಗಳೂರಿನ ಸಿಐಡಿ ಘಟಕದ ಆಡಳಿತ ವಿಭಾಗದ ಸೆಕ್ಷನ್ ಸೂಪರಿಂಟೆಂಡೆಂಟ್, ಬಿ.ಎಸ್‌.ಆರ್‌.ಪಿ.ಸಿ ಲೇಔಟ್‌ನ ನಿವಾಸಿ ಬಿ.ಎಸ್‌.ಅನಿತಾ(42) ಹಾಗೂ ಮಧ್ಯವರ್ತಿ ರಾಮಚಂದ್ರ ಭಟ್(56) ಬಂಧಿತರು. ಚಿಕ್ಕಮಗಳೂರಿನ ಕಲ್ಯಾಣನಗರದ ಸುನಿಲ್ ಅವರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

    ‘2021ರಲ್ಲಿ ಸ್ನೇಹಿತ ಮಂಜುನಾಥ್ ಮೂಲಕ ಸುನಿಲ್ ಅವರಿಗೆ ರಾಮಚಂದ್ರ ಭಟ್ ಪರಿಚಯವಾಗಿತ್ತು. ತನಗೆ ಬೆಂಗಳೂರಿನ ಸಿಐಡಿ ಘಟಕದ ಅಧಿಕಾರಿ ಅನಿತಾ ಅವರ ಪರಿಚಯವಿದ್ದು, ಅವರಿಗೆ ಕೆಪಿಎಸ್‌ಸಿ ಹಾಗೂ ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಹಲವು ಪ್ರಭಾವಿ ವ್ಯಕ್ತಿಗಳ ಸಂಪರ್ಕವಿದೆ. ಸರ್ಕಾರಿ ಕೆಲಸ ಕೊಡಿಸುತ್ತೇನೆ’ ಎಂದು ರಾಮಚಂದ್ರ ಭಟ್ ನಂಬಿಸಿದ್ದ. ಇದಕ್ಕೆ ಹಣ ನೀಡಬೇಕೆಂದು ಹೇಳಿದ್ದ. ಅದಾದ ಮೇಲೆ ಸುನಿಲ್‌, ಸಿಐಡಿ ಕಚೇರಿಯಲ್ಲಿ ಅನಿತಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ’ ಎಂದು ಮೂಲಗಳು ತಿಳಿಸಿವೆ.

    ಕಚೇರಿಯಲ್ಲೇ ಹಣದ ವ್ಯವಹಾರ: ‘ಸಿಐಡಿ ಕಚೇರಿಯಲ್ಲೇ ಅನಿತಾ ಹಾಗೂ ಮಧ್ಯವರ್ತಿ ಹಣದ ವ್ಯವಹಾರ ನಡೆಸುತ್ತಿದ್ದರು. ಕಚೇರಿಗೆ ಬಂದವರಿಗೆ ಗುರುತಿನ ಚೀಟಿ ತೋರಿಸಿ ನಂಬಿಸುತ್ತಿದ್ದ ಅನಿತಾ, ಕೆಪಿಎಸ್‌ಸಿ ಮೂಲಕ ಪಿಡಬ್ಲ್ಯುಡಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಕೆಲಸ ಕೊಡಿಸುವುದಾಗಿ ಸುನಿಲ್‌ಗೆ ನಂಬಿಸಿದ್ದಳು. ಸುನಿಲ್‌ ₹40 ಲಕ್ಷ ನೀಡಿದ್ದ. ನಂತರ ಹಣ ಪಡೆದು ಸುನಿಲ್‌ಗೆ ಯಾವುದೇ ಕೆಲಸ ಕೊಡಿಸಿರಲಿಲ್ಲ’ ಎಂದು ಮೂಲಗಳು ತಿಳಿಸಿವೆ.

    ‘ಕೆಲಸ ಕೊಡಿಸದ ಕಾರಣಕ್ಕೆ ಹಣ ವಾಪಸ್‌ ನೀಡುವಂತೆ ಸುನಿಲ್‌ ಮನವಿ ಮಾಡಿದ್ದ. ಆಗ ಅನಿತಾ ಹಾಗೂ ರಾಮಚಂದ್ರ ಭಟ್‌ ಬೆದರಿಕೆ ಒಡ್ಡಿದ್ದರು. ಇಬ್ಬರು ಆರೋಪಿಗಳು ಇದೇ ರೀತಿ ₹2 ಕೋಟಿ ವಂಚಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

    ‘ಆರೋಪಿ ಅನಿತಾ ನಗದು ರೂಪದಲ್ಲಿ ಮಾತ್ರ ಹಣ ಪಡೆಯುತ್ತಿದ್ದರು. ಚೆಕ್‌ ಪಡೆಯುತ್ತಿರಲಿಲ್ಲ. ಆನ್‌ಲೈನ್‌ ಮೂಲಕ ಹಣ ಪಡೆಯಲು ನಿರಾಕರಿಸುತ್ತಿದ್ದರು. ಅನಿತಾ ಇದುವರೆಗೂ 6 ಮಂದಿಗೆ ವಂಚನೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಇದೇ ರೀತಿ ವಿಜಯಪುರ, ಬಾಗಲಕೋಟೆ ಮತ್ತು ಗದಗ ಜಿಲ್ಲೆಯ ಹಲವು ಮಂದಿಗೆ ವಂಚನೆ ಆಗಿದೆ. ವಂಚನೆಗೆ ಒಳಗಾದವರು ವಿಜಯನಗರ ಠಾಣೆಗೆ ಹಾಜರಾಗಿ ದೂರು ನೀಡಬಹುದು’ ಎಂದು ಪೊಲೀಸರು ತಿಳಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *