LATEST NEWS
ಮತೀಯ ಸೂಕ್ಷ್ಮ ಜಿಲ್ಲೆಗೆ ಯಾವುದೇ ಅಧಿಕಾರಿಯನ್ನು ನಿಯೋಜಿಸಬೇಕಾದರೆ ಆಲೋಚಿಸಿ ಸಮರ್ಥ ಅಧಿಕಾರಿಗಳನ್ನು ಜಿಲ್ಲೆಗೆ ಹಾಕಬೇಕು – ರಮಾನಾಥ ರೈ

ಮಂಗಳೂರು ಮೇ 01: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಧರ್ಮಾಧರಿತ ಹತ್ಯೆಗಳ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚನೆ ಆಗಬೇಕು. ಹತ್ಯೆಗೆ ಕಾರಣಗಳೇನು, ಅದರ ಹಿಂದಿರುವ ವ್ಯಕ್ತಿಗಳು ಯಾರು ಎನ್ನುವ ಬಗ್ಗೆ ತನಿಖೆ ಆಗಬೇಕಾಗಿದೆ. ಕೋಮು ಆಧಾರಿತ ಹತ್ಯೆಗಳು ನಿಲ್ಲಬೇಕಾದರೆ ಇಂತಹ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಬೇಕು. ಕುಡುಪು ಗುಂಪು ಹತ್ಯೆ ಪ್ರಕರಣವನ್ನೂ ಎಸ್‌ಐಟಿಯಿಂದ ತನಿಖೆಗೆ ಒಳಪಡಿಸಬೇಕು’ ಎಂದು ಮಾಜಿ ಶಾಸಕ ರಮಾನಾಥ ರೈ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ರಮಾನಾಥ ರೈ ಕುಡುಪು ಭಾಗದಲ್ಲಿ ನಡೆದಿರುವ ಗುಂಪು ಹತ್ಯೆಯನ್ನು ಪ್ರಸ್ತಾಪಿಸುತ್ತ ಆ ಯುವಕ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ್ದಾನೆಯೇ, ಇಲ್ಲವೇ ಎನ್ನುವುದು ಅಲ್ಲಿದ್ದವರಿಗೆ ಮಾತ್ರ ಗೊತ್ತು. ಯಾರು ಹೊಡೆದಿದ್ದಾರೋ ಅವರು ಮತ್ತು ಅಲ್ಲಿ ಸಾಕ್ಷಿಗಳಾಗಿದ್ದವರಿಗೆ ತಿಳಿದಿರಬಹುದು. ಅದನ್ನು ಹೊರತುಪಡಿಸಿ ಸತ್ತ ಯುವಕನಿಗೆ ಮಾತ್ರ ಗೊತ್ತಿರಬಹುದು. ಆರಂಭದಲ್ಲಿ ಪೊಲೀಸರು ಸ್ವಲ್ಪ ತಡವರಿಸಿದ್ದಾರೆ, ಆನಂತರ ಶೀಘ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇಂತಹ ಹತ್ಯೆಗಳ ಹಿಂದೆ ಮತೀಯವಾದಿ ಶಕ್ತಿಗಳ ಕೈವಾಡ ಇದೆ ಎಂದರು.

ಕೋಮುಘರ್ಷಣೆ ವಿವಿಧ ಕಡೆ ನಡೆಯತ್ತದೆ. ಬಳಿಕ ಪರಿಸ್ಥಿತಿ ಯಥಾಸ್ಥಿತಿಗೆ ಬರುತ್ತದೆ. ಆದರೆ ನಮ್ಮ ಜಿಲ್ಲೆಯಲ್ಲಿ ನಡೆದದ್ದು ಉದ್ದೇಶಿತ ಹತ್ಯೆಗಳು. ಒಂದು ಹತ್ಯೆಗೆ ಪ್ರತೀಕಾರವಾಗಿ ಇನ್ನೊಂದು ಹತ್ಯೆ ನಡೆಯುತ್ತದೆ. ಇಂತಹ ಹತ್ಯೆಗಳನ್ನು ನಿಗ್ರಹಕ್ಕೆ ತರಬೇಕಾದರೆ ಅವುಗಳ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚಬೇಕು. ಅವರು ಎಷ್ಟೇ ಪ್ರಭಾವಿ ವ್ಯಕ್ತಿಗಳಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಎಸ್‌ಐಟಿ ರಚಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು. ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕ್ರಮ ಜರುಗಿಸುವಾಗ ತಡವಾಗಿದೆ ಎಂಬುದನ್ನು ಒಪ್ಪುತ್ತೇನೆ. ಮತೀಯ ಸೂಕ್ಷ್ಮ ಜಿಲ್ಲೆಗೆ ಯಾವುದೇ ಅಧಿಕಾರಿಯನ್ನು ನಿಯೋಜಿಸಬೇಕಾದರೆ ಆಲೋಚಿಸಬೇಕು. ಸಮರ್ಥ ಅಧಿಕಾರಿಗಳನ್ನು ಜಿಲ್ಲೆಗೆ ಹಾಕಬೇಕು ಎಂದರು.
ಕುಡುಪು ಹತ್ಯೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೆ ಆದಷ್ಟು ಶೀಘ್ರ ನಿಯೋಗಕ್ಕೆ ಒಯ್ಯುತ್ತೇವೆ. ಜಿಲ್ಲೆಯ ಎಲ್ಲ ವಿಚಾರಗಳನ್ನು ಸವಿಸ್ತಾರವಾಗಿ ವಿವರಿಸುತ್ತೇವೆ. ಅವರು ಇಂತಹ ವಿಚಾರ ಗಮನ ವಹಿಸುತ್ತಾರೆ ಎಂಬ ನಂಬಿಕೆ ಇದೆ’ ಎಂದರು.