UDUPI
ಮಾಧ್ಯಮ ಪ್ರತಿನಿಧಿಗಳೆದುರು ಕಣ್ಣೀರಿಟ್ಟ ಅನುಪಮಾ ಶೆಣೈ
ಉಡುಪಿ, ಸೆಪ್ಟೆಂಬರ್ 5: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹ್ಯೂಬ್ಲೋಟ್ ವಾಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಪತ್ರ ಬರೆದಿದ್ದಾರೆ .
ಈ ಕುರಿತು ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದಾರೆ. ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉದ್ಯಮಿ ಬಿ.ಆರ್ ಶೆಟ್ಟಿ ಅವರ ಹೆಸರನ್ನು ಉಲ್ಲೇಖಿ ಸೇರಿಸಿರುವುದಾಗಿ ಅವರು ತಿಳಿಸಿದರು.
ಪತ್ರಕ್ಕೆ ಪ್ರಧಾನ ಮಂತ್ರಿ ಕಚೇರಿಯಿಂದ ಉತ್ತರ ಬಂದಿದ್ದು ದೂರು ಪತ್ರವನ್ನು ಮುಂದಿನ ಹಂತಕ್ಕೆ ವರ್ಗಾವಣೆ ಮಾಡಿರುವುದಾಗಿ ಹೇಳಲಾಗಿದೆ.
ಆದರೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು .
ನಾನು ನೀಡಿದ ದೂರಿನ ಕುರಿತು 2 ತಿಂಗಳು ಕಾದು ನೋಡುತ್ತೇನೆ. ಮುಂದಿನ ಬೆಳವಣಿಗೆಗಳನ್ನು ನೋಡಿ ನಂತರ ಕಾನೂನು ಸಮರಕ್ಕೆ ಮುಂದಾಗುತ್ತೇನೆ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು .
ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಹಾಗೂ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ನೆನೆದು ಕಣ್ಣೀರಿಟ್ಟರು .
ಈ ಪ್ರಕರಣಗಳ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅನುಪಮಾ ಶೆಣೈ ಸಿಐಡಿ ಪೊಲೀಸರಿಗೆ ನಾಚಿಕೆಯಾಗಬೇಕು ಸತ್ತಿರುವುದು ನಿಮ್ಮ ಸಹೋದ್ಯೋಗಿಗಳೇ ಎನ್ನುವುದನ್ನು ಮರೆಯಬೇಡಿ ಎಂದು ಕಿಡಿಕಾರಿದರು .