LATEST NEWS
ಮತೀಯ ಗೂಂಡಾಗಿರಿಗೆ ಸಿಎಂ ಪ್ರೋತ್ಸಾಹ ಇದೆ – ಸಿದ್ದರಾಮಯ್ಯ

ಮಂಗಳೂರು ಡಿಸೆಂಬರ್ 17: ಮತೀಯ ಗೂಂಡಾಗಿರಿ ಮಾಡುವವರಿಗೆ ಸಿಎಂ ಪ್ರೋತ್ಸಾಹಿಸುವ ಹೇಳಿಕೆ ನೀಡಿದ್ದರು, ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೇಳಿಕೆ ನೀಡಿದರೆ ಮತ್ತೇನಾಗುತ್ತದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಕರಾವಳಿಯಲ್ಲಿ ಒಂದು ತಿಂಗಳಿನಿಂದ ಮತೀಯ ಗೂಂಡಾಗಿರಿಯ ಸುಮಾರು ಏಳೆಂಟು ಪ್ರಕರಣಗಳು ನಡೆದಿವೆ. ಇವುಗಳನ್ನು ನಾನು ಖಂಡಿಸುತ್ತೇನೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಕ್ರಮ ತಗೆದುಕೊಳ್ಳಲಿ’ ಎಂದು ಒತ್ತಾಯಿಸಿದರು. ”ಅನಗತ್ಯವಾಗಿ ಅನ್ಯರ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದನ್ನು ನಾನು ಖಂಡಿಸುತ್ತೇನೆ. ಸರ್ಕಾರವೂ ಇದಕ್ಕೆ ಅವಕಾಶ ಕೊಡಬಾರದು’ ಎಂದರು . ಮತೀಯ ಗೂಂಡಾಗಿರಿ ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲ.

ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇದನ್ನು ಪ್ರೋತ್ಸಾಹಿಸುವ ಹೇಳಿಕೆ ನೀಡಿದ್ದರು. ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೇಳಿಕೆ ನೀಡಿದರೆ ಮತ್ತೇನಾಗುತ್ತದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ‘ಮುಖ್ಯಮಂತ್ರಿ ಅವರಿಗೆ ಕಾನೂನು ಗೊತ್ತಿದೆಯೇ ಇಲ್ಲವೊ ಎಂದು ನನಗೆ ಅರಿವಿಲ್ಲ. ಸಂವಿಧಾನದಲ್ಲಿ ಇದಕ್ಕೆ ಎಲ್ಲಾದರೂ ಅವಕಾಶವಿದೆಯೇ? ಪೊಲೀಸರು ಇರುವುದು ಏಕೆ ಮತ್ತೆ’ ಎಂದು ಪ್ರಶ್ನಿಸಿದರು. ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅದು ಬಿಟ್ಟು ಭಯೋತ್ಪಾದನೆಗೆ ಸಹಕಾರ ನೀಡುತ್ತೇನೆಂದು ಹೇಳಿದ್ದಾರೆಯೇ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.