LATEST NEWS
ಎಮ್ಮೆಕೆರೆಯ ಸ್ವಿಮ್ಮಿಂಗ್ ಪೂಲ್ ಗೆ ದುಬಾರಿ ಶುಲ್ಕ ಇಲ್ಲ – ವಿ ವನ್ ಅಕ್ವಾ ಸೆಂಟರ್ ಸ್ಪಷ್ಟನೆ

ಮಂಗಳೂರು, ಮಾ 05 : ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ ಅಂತರಾಷ್ಟ್ರೀಯ ಮಟ್ಟದ ಈಜುಕೊಳದಲ್ಲಿ ರಾಜ್ಯ, ರಾಷ್ಟ್ರೀಯ ಮಟ್ಟದ ಈಜು ಪಟುಗಳಿಗೆ ದುಬಾರಿ ಶುಲ್ಕ ವಿಧಿಸಲಾಗುತ್ತದೆ ಎಂಬ ಆರೋಪದ ಬಗ್ಗೆ ಈಜುಕೊಳ ನಿರ್ವಹಣೆ ವಹಿಸಿಕೊಂಡಿರುವ ವಿ ವನ್ ಅಕ್ವಾ ಸೆಂಟರ್ ನಿರ್ದೇಶಕ ನವೀನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ನಾವು ಯಾವುದೇ ರೀತಿ ದುಬಾರಿ ಶುಲ್ಕ ವಿಧಿಸುವುದಿಲ್ಲ ಎಂದಿದ್ದಾರೆ.

ಎಮ್ಮೆಕೆರೆಯಲ್ಲಿರುವ ಈಜು ಕೊಳದಲ್ಲಿ ಉತ್ತಮ ಸೌಕರ್ಯಗಳಿದ್ದು ಇಂತಹ ಸ್ವಿಮ್ಮಿಂಗ್ ಪೂಲ್ ಮತ್ತು ನುರಿತ ಕೋಚ್ ಗಳಿಂದ ತರಬೇತಿ ಪಡೆಯಲು ಬೆಂಗಳೂರಿನಂತಹ ನಗರದಲ್ಲಿ 15 ಸಾವಿರ ಕೊಡಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲೂ ಉತ್ತಮ ಪ್ರದರ್ಶನ ನೀಡುವಂತಹ ಈಜುಪಟುಗಳು ಮಂಗಳೂರಿನಲ್ಲಿದ್ದಾರೆ. ಅಂತಾರಾಷ್ಟ್ರೀಯ ಈಜು ಒಕ್ಕೂಟ (ಎಫ್‌ಐಎನ್‌ಎ) ನಿಗದಿಪಡಿಸಿದ ಮಾನದಂಡಗಳ ಪ್ರಕಾರ ನಿರ್ಮಾಣಗೊಂಡಿರುವ ಈಜುಕೊಳದ ಸದುಪಯೋಗ ಸಿಗಲಿ ಎಂಬ ಕಾರಣಕ್ಕೆ ಬೆಂಗಳೂರಿನಿಂದ ತರಬೇತುದಾರರನ್ನು ಕರೆಸಿ ಗುಣಮಟ್ಟದ ತರಬೇತಿ ಒದಗಿಸುತ್ತಿದ್ದೇವೆ. ಇಲ್ಲಿನ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಖೇಲೊ ಇಂಡಿಯಾ ಯೋಜನೆಗಳಲ್ಲಿ ಅವಕಾಶ ಪಡೆದಷ್ಟು ಮಂಗಳೂರು ಖೇಲೊ ಇಂಡಿಯಾ ಯೋಜನೆಗೆ ಆಯ್ಕೆ ಸುಲಭವಾಗುತ್ತದೆ ಎಂದರು.

ಶುಲ್ಕ ದುಬಾರಿ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, 50 ಲಕ್ಷ ರು. ಭದ್ರತಾ ಠೇವಣಿ ಹಾಗೂ ತಿಂಗಳಿಗೆ 2.61 ಲಕ್ಷ ರು. ಶುಲ್ಕ ನೀಡಿ ಮೂರು ತಿಂಗಳಿನಿಂದ ನಿರ್ವಹಣೆ ಮಾಡುತ್ತಿದ್ದೇವೆ. ಮೂರು ತಿಂಗಳುಗಳಲ್ಲಿ 3 ಸಾವಿರ ಮಂದಿ ತರಬೇತಿ ಪಡೆದಿದ್ದಾರೆ. 12 ವರ್ಷದೊಳಗಿನ ಮಕ್ಕಳಿಗೆ ಕೊಳದ ಶುಲ್ಕ ಸೇರಿ ತಿಂಗಳಿಗೆ 3500 ರೂ. ಪಡೆಯುತ್ತೇವೆ. ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಹಾಗೂ ರಾಜ್ಯ ಮಟ್ಟದಲ್ಲಿ ಪದಕ ಗೆದ್ದ ಈಜು ಪಟುಗಳಿಗೆ ರಿಯಾಯಿತಿ ಇದ್ದು ಒಂದು ಸಾವಿರ ಅಷ್ಟೇ ಶುಲ್ಕ ಪಡೆಯುತ್ತೇವೆ. ಇತರ ಸಾರ್ವಜನಿಕರಿಗೆ ತರಬೇತಿ ಸಹಿತ ನಾಲ್ಕು ಸಾವಿರ ಪಡೆಯುತ್ತೇವೆ. ಭದ್ರತಾ ಸಿಬ್ಬಂದಿ, ಮೇಲ್ವಿಚಾರಕರು ಹಾಗೂ ವ್ಯವಸ್ಥಾಪಕರ ವೇತನವನ್ನೂ ನೀಡಬೇಕು. ಎಲ್ಲ ಸೇರಿ ತಿಂಗಳಿಗೆ ನಮಗೆ 11 ಲಕ್ಷ ವೆಚ್ಚವಾಗುತ್ತದೆ. ಇದೇ ಗುಣಮಟ್ಟದ ತರಬೇತಿಯನ್ನು ಬೆಂಗಳೂರಿನಲ್ಲಿ ₹ 15 ಸಾವಿರದಷ್ಟು ಶುಲ್ಕ ನೀಡಬೇಕಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿ ವನ್ ಅಕ್ವಾ ಸೆಂಟರ್ ಅಧ್ಯಕ್ಷ ಮಧುರಾಜ್, ಗೌರವ ಅಧ್ಯಕ್ಷ ಡಾ.ನಾಗೇಂದ್ರ, ಆಡಳಿತ ಪಾಲುದಾರರಾದ ರೂಪಾ ಜಿ.ಪ್ರಭು, ಹಿರಿಯ ತರಬೇತುದಾರ ಲೋಕರಾಜ್ ವಿಟ್ಲ, ಶೆರ್ಲಿ ರೇಗೊ ಭಾಗವಹಿಸಿದ್ದರು.
1 Comment