DAKSHINA KANNADA
ಅಜ್ಜಾವರ – ತಾಯಿಯಿಂದ ಬೇರ್ಪಟ್ಟ ಮರಿಯಾನೆಯ ರೋಧನ
ಸುಳ್ಯ ಎಪ್ರಿಲ್ 15: ತಾಯಿ ಆನೆಯಿಂದ ಬೇರ್ಪಟ್ಟ ಮರಿಯಾನೆ ತನ್ನ ತಾಯಿಗಾಗಿ ಅಜ್ಜಾವರ ಗ್ರಾಮದಲ್ಲಿ ಅತ್ತಿತ್ತ ಓಡಾಡುತ್ತಿದ್ದು, ಈ ಸನ್ನಿವೇಶ ನೋಡುಗರ ಮನ ಕಲಕುವಂತಿದೆ. ಸದ್ಯ ಆನೆ ಮರಿಯ ಬಗ್ಗೆ ಅರಣ್ಯ ಇಲಾಖೆಯವರು ನಿಗಾ ವಹಿಸಿದ್ದಾರೆ. ತಾಯಿ ಇಲ್ಲದ ತಬ್ಬಲಿ ಮೂರು ತಿಂಗಳ ಮರಿ ಆನೆಗೆ ಈಗ ಮನುಷ್ಯನೇ ಆಸರೆಯಾಗಿದೆ.
ಅಜ್ಜಾವರದಲ್ಲಿ ಎರಡು ದಿನಗಳ ಹಿಂದೆ ಆಹಾರ ಅರಸುತ್ತ ಬಂದಿದ್ದ ಕಾಡಾನೆಗಳ ಗುಂಪೊಂದು ಆಯ ತಪ್ಪಿ ಕೆರೆಗೆ ಬಿದ್ದಿದ್ದವು. ಕೆರೆಗೆ ಬಿದ್ದ ನಾಲ್ಕು ಆನೆಗಳ ಪೈಕಿ ಎರಡು ದೊಡ್ಡ ಆನೆ ಹಾಗೂ ಇನ್ನೆರಡು ಮರಿ ಆನೆಗಳಾಗಿದ್ದವು. ಅದರಲ್ಲಿ ಮೂರು ಆನೆಗಳು ಕಷ್ಟಪಟ್ಟು ಕೆರೆಯಿಂದ ಮೇಲೆ ಬಂದಿದ್ದರೆ, ಸುಮಾರು ಮೂರು ತಿಂಗಳ ಒಂದು ಮರಿಯಾನೆ ಮೇಲೆ ಬರಲಾಗದೆ ಕುಸಿದು ಬೀಳುತ್ತಿತ್ತು. ಅರಣ್ಯ ಇಲಾಖೆಯವರು ಮತ್ತು ಸ್ಥಳೀಯರು ಕೆರೆಗಿಳಿದು ಈ ಮರಿಯಾನೆಯನ್ನು ತಳ್ಳಿ ಮೇಲಕ್ಕೆ ಹತ್ತಿಸಿದ್ದರು. ನಂತರ ಕಾಡಿನೆಡೆಗೆ ಸಾಗಿದ್ದ ಆನೆಗಳ ಜತೆ ಮರಿಯಾನೆಯನ್ನು ಬಿಡಲಾಗಿತ್ತು. ಅದು ತಾಯಿ ಜೊತೆ ಹೋಗದೆ ಸಂಜೆ ವೇಳೆಗೆ ಮತ್ತೆ ರಬ್ಬರ್ ತೋಟಕ್ಕೆ ಮರಳಿತ್ತು.
ಮರಿಯಾನೆಯನ್ನು ಮನುಷ್ಯರು ಮುಟ್ಟಿ ಮೇಲಕ್ಕೆ ಹತ್ತಿಸಿದ್ದರಿಂದ ಆನೆಗಳು ಅದನ್ನು ಸ್ವೀಕರಿಸುತ್ತಿಲ್ಲ ಎಂದು ಸ್ಥಳೀಯರು ಅನುಮಾನಿಸಿದ್ದರು. ಆದರೆ ಆನೆಗಳಲ್ಲಿ ಆ ರೀತಿಯ ಯಾವುದೇ ಸ್ವಭಾವ ಇಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಈ ಆನೆ ಮರಿಗೆ ಕೇವಲ ಮೂರು ತಿಂಗಳು ಮಾತ್ರ ಆಗಿದೆ.ಇದಕ್ಕೆ ತಾಯಿಯ ಹಾಲು ಅಗತ್ಯವಾಗಿದೆ. ತಾಯಿ ಹಾಲು ಸಿಗದಿರುವ ಹಿನ್ನೆಲೆಯಲ್ಲಿ ಪೌಷ್ಟಿಕಾಯುಕ್ತ ಚಿಕಿತ್ಸೆ ಮಾಡುವ ಅಗತ್ಯ ಇದೆ. ಚಿಕಿತ್ಸೆ ನೀಡಿ ಬೇರೆಡೆಗೆ ಸ್ಥಳಾಂತರಿಲಾಗುವುದು ಎಂದು ಸುಳ್ಯದ ಆರ್‌ಎಫ್ಒ ಮಂಜುನಾಥ್ ತಿಳಿಸಿದ್ದಾರೆ.