LATEST NEWS
ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್ ದಿಢೀರ್ ರಾಜೀನಾಮೆ….!! ಕಾರಣ ನಿಗೂಢ
ನವದೆಹಲಿ ಮಾರ್ಚ್ 09: ಲೋಕಸಭಾ ಚುನಾವಣೆಗೆ ದಿನಗಣನೆ ಇರುವಾಗಲೇ ಇದೀಗ ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಸುದ್ದಿ ಎಲ್ಲರನ್ನು ಆಶ್ಚರ್ಯಗೊಳಿಸಿದೆ. ಲೋಕಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ ಆಘಾತಕಾರಿ ರೀತಿಯಲ್ಲಿ ಚುನಾವಣಾ ಆಯುಕ್ತ ಅರುಣ್ ಗೋಯಲ್ ರಾಜೀನಾಮೆ ನೀಡಿದ್ದಾರೆ. ಅವರ ಅಧಿಕಾರಾವಧಿ 2027 ರವರೆಗೆ ಇತ್ತು.
ಅರುಣ್ ಗೋಯಲ್ ರಾಜೀನಾಮೆ ನಂತರ ಈಗ ಉಳಿದಿರುವುದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾತ್ರ. ಭಾರತದ ಚುನಾವಣಾ ಆಯೋಗದಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ಹೊರತುಪಡಿಸಿ ಇಬ್ಬರು ಚುನಾವಣಾ ಆಯುಕ್ತರಿದ್ದಾರೆ.
ಗೋಯೆಲ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ. ಲೋಕಸಭೆ ಚುನಾವಣೆ ದಿನಾಂಕವನ್ನು ಮುಂದಿನ ವಾರ ಘೋಷಿಸುವ ಸಾಧ್ಯತೆಯಿದೆ. ಗೋಯೆಲ್ ಅವರ ರಾಜೀನಾಮೆ ಈಗ ಆ ಟೈಮ್‌ಲೈನ್‌ನಲ್ಲಿ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿದೆ.
ಇದೀಗ ಚುನಾವಣಾ ವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರ ಹೆಗಲ ಮೇಲೆ ಬಿದ್ದಿದೆ. ಅರುಣ್ ಗೋಯಲ್ ಅವರು ಮುಖ್ಯ ಚುನಾವಣಾ ಆಯುಕ್ತರೊಂದಿಗೆ ಚುನಾವಣಾ ತಯಾರಿಗಾಗಿ ಹಲವು ರಾಜ್ಯಗಳಿಗೆ ಭೇಟಿ ನೀಡಿದ್ದರು.
ಇದೀಗ ದಿಢೀರನೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಸಂಬಂಧ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಶನಿವಾರ ಹೊರಡಿಸಿದ ಗೆಜೆಟ್ ಅಧಿಸೂಚನೆಯಲ್ಲಿ, ‘ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ, ಇದನ್ನು ಮಾರ್ಚ್ 09, 2024 ರಿಂದ ಜಾರಿಗೆ ಬರಲಿದೆ ಎಂದು ಪರಿಗಣಿಸಲಾಗುವುದು’ ಎಂದು ಹೇಳಲಾಗಿದೆ.